ಮೈಸೂರು: ಶಾಲಾ ಬಾಲಕಿ ಮೇಲೆ ಚಾಲಕನ ಅಜಾಗರೂಕತೆಯಿಂದ ಬಸ್ ಹರಿಸಿರೋ ಘಟನೆ ಹುಣಸೂರಿನ ಮಂಜುನಾಥ ಬಡಾವಣೆಯಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶಾಲಾ ವಾಹನ ಚಾಲಕ ಮೊದಲು ಬಸ್ನಿಂದ ಇಬ್ಬರು ಮಕ್ಕಳನ್ನು ಇಳಿಸುತ್ತಾನೆ. ಶಾಲಾ ವಾಹನದಿಂದ ಇಳಿದು ಅದೇ ವಾಹನದ ಮುಂಭಾಗದಿಂದ ಮನೆ ಕಡೆ ಹೋಗುತ್ತಿದ್ದಂತೆ ಏಕಾಏಕಿ ಚಾಲಕ ಶಾಲಾ ಬಸ್ ಅನ್ನು ಚಲಿಸಿಕೊಂಡು ಹೋಗುತ್ತಾನೆ. ನೋಡ ನೋಡುತ್ತಿದ್ದಂತೆ ಬಾಲಕಿಗೆ ಬಸ್ ಡಿಕ್ಕಿ ಹೊಡೆಯುತ್ತದೆ.
ಈ ವೇಳೆ ಬಾಲಕಿ ಬಸ್ ಅಡಿಯಲ್ಲಿ ಬೀಳುತ್ತಾಳೆ. ಇದನ್ನು ನೋಡಿದ ಕೂಡಲೇ ಸ್ಥಳೀಯರು ಬಾಲಕಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಲೆ ಎಂದು ಹೇಳಲಾಗುತ್ತಿದೆ. ಈ ಘಟನೆ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ಘಟನೆಯೂ ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಅಪಘಾತ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿ ಬಳಿ ಬೈಕ್ ಮತ್ತು ಬೊಲೆರೊ ವಾಹನದ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ತಡರಾತ್ರಿ ಮೈಸೂರಿನ ಯಾದವಗಿರಿ ಸಮೀಪ ನಿಯಂತ್ರಣ ತಪ್ಪಿ ಬೈಕ್ನಿಂದ ಬಿದ್ದು ಇಬ್ಬರು ಸ್ಥಳದಲ್ಲೇ ದುರ್ಮರಣರಾಗಿದ್ದಾರೆ.
ಬೈಕ್-ಬೊಲೆರೊ ವಾಹನ ಅಪಘಾತ: ಆಂಧ್ರಪ್ರದೇಶ ಮೂಲದ ಬೊಲೆರೋ ವಾಹನ ಪಿರಿಯಾಪಟ್ಟಣ ಕಡೆಯಿಂದ ಹುಣಸೂರಿಗೆ ತೆರಳುತ್ತಿತ್ತು. ಹುಣಸೂರಿನಿಂದ ಅತ್ತಿಗುಪ್ಪೆ ಕಡೆ ಬರುತ್ತಿದ್ದ ಬೈಕ್ ನಡುವೆ ಅರಸು ಕಲ್ಲಹಳ್ಳಿ ಗೇಟ್ ಬಳಿ ಮುಖಾ ಮುಖಿ ಡಿಕ್ಕಿಯಾಗಿದೆಎ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತ್ತಿಗುಪ್ಪೆ ಗ್ರಾಮದ ಕರಿಯಪ್ಪ (40), ನಾಗರಾಜು (57) ಮೃತರು. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ನಿಂದ ಬಿದ್ದು ಇಬ್ಬರು ಮೃತ: ತಡರಾತ್ರಿ ಮೈಸೂರಿನ ಯಾದವಗಿರಿ ಸಮೀಪ ನಿಯಂತ್ರಣ ತಪ್ಪಿ ಬೈಕ್ನಿಂದ ಬಿದ್ದು ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಗೋಕುಲಂ ನಿವಾಸಿಗಳಾದ ಸಿದ್ದರಾಜು (20), ನಿರಂಜನ್ (20) ಮೃತದುರ್ದೈವಿಗಳು. ಬೈಕ್ನಲ್ಲಿದ್ದ ಮತ್ತೋರ್ವನಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.