ಬೆಂಗಳೂರು: ಮಹಾಮಾರಿ ಕೋವಿಡ್ ಸೋಂಕಿನಿಂದ ಮೃತಪಟ್ಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕೇವಲ ಏಳು ಕುಟುಂಬದವರಿಗೆ ರಾಜ್ಯ ಸರ್ಕಾರ ತಲಾ 30 ಲಕ್ಷ ರೂಪಾಯಿಯ ಚೆಕ್ ಹಸ್ತಾಂತರಿಸಿದ್ದು ಬಿಟ್ಟರೆ ಈವರೆಗೂ ಕೊರೊನಾದಿಂದ ಮೃತಪಟ್ಟ ಉಳಿದ 210ಕ್ಕೂ ಹೆಚ್ಚು ನೌಕರರ ಕುಂಟುಬದವರಿಗೆ ಚೆಕ್ ವಿತರಿಸದೆ ವಿಳಂಬ ಮಾಡಲಾಗುತ್ತಿದೆ.
ಕಳೆದ 2021ರ ಫೆಬ್ರವರಿ 26ರಂದು ವಿಧಾನಸೌಧದ ಆವರಣದಲ್ಲಿ ರಸ್ತೆ ಸಾರಿಗೆ ಸಂಸ್ಥೆಯಿಂದ ಆಯೋಜಿಸಿದ್ದ ನಮ್ಮ ಕಾರ್ಗೋ ಸೇವೆ ಉದ್ಘಾಟನೆ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟ ಸಾರಿಗೆ ನೌಕರರ ಏಳು ಕುಟುಂಬದವರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಿದರು.
ಆ ವೇಳೆ ಮಾತನಾಡಿದ ಅಂದಿನ ಸಿಎಂ ಬಿಎಸ್‌ವೈ, ಸಾರಿಗೆ ಇಲಾಖೆ ಆದಾಯ ಹೆಚ್ಚಿಸಿ ಗ್ರಾಹಕರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯ ನೀಡುವ ನೂತನ ಕಾರ್ಗೋ ಸೇವೆಗೆ ಇಂದಿನಿಂದ ಚಾಲನೆ ನೀಡಲಾಗಿದೆ. ಈ ಸೇವೆ ದಕ್ಷಿಣ ಭಾರತದ ರಾಜ್ಯಗಳಿಗೆ ದೊರಕಲಿದೆ ಎಂದ ಅವರು, ರು.ನಿಗಮ ಪ್ರತಿದಿನ 38 ಲಕ್ಷ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ ಎಂದು ಹೆಮ್ಮೆಪಟ್ಟಿದ್ದರು.
ಅದರ ಜತೆಗೆ ಕೊರೊನಾದಿಂದ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸಿದ್ದಾವೆ. ಇದರ ನಡುವೆಯೂ ಸಾರಿಗೆ ಸಿಬ್ಬಂದಿ ಜೀವಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಕೊರೊನಾಗೆ ಬಲಿಯಾದ ಸಿಬ್ಬಂದಿಗೆ ತಲಾ 30 ಲಕ್ಷ ರೂ. ಪರಿಹಾರ ವಿತರಿಸಿದ್ದೇವೆ ಉಳಿದವರ ಕುಟುಂಬದವರಿಗೂ ಶೀಘ್ರದಲ್ಲೇ ಪರಿಹಾರದ ಚೆಕ್ ವಿತರಿಸುತ್ತೇವೆ ಎಂದು ತಿಳಿಸಿದ್ದರು.
ಆ ಸಮಾರಂಭದಲ್ಲಿ ಅಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಸಚಿವರಾಗಿದ್ದ ಉಮೇಶ್ ಕತ್ತಿ, ಡಾ.ಕೆ.ಸುಧಾಕರ್, ಅಂದಿನ ಕೆಎಸ್ಸಾರ್ಟಿಸಿ ಎಂಡಿ ಶಿವಯೋಗಿ ಕಳಸದ, ಬಿಎಂಟಿಸಿ ಎಂಡಿ ಶಿಖಾ ಇದ್ದರು.
ಇನ್ನು ಆ ಸಮಾರಂಭ ಕಳೆದು 2 ವರ್ಷ 4 ತಿಂಗಳು ಕಳೆದಿದ್ದರೂ ಈವರೆಗೂ ಕೊರೊನಾದಿಂದ ಮೃತಪಟ್ಟ 110ಕ್ಕೂ ಹೆಚ್ಚು ಸಾರಿಗೆ ನೌಕರರ ಕುಟುಂಬದವರಿಗೆ ಈವರೆಗೂ ಯಾವುದೇ ಪರಿಹಾರ ವಿತರಿಸಿಲ್ಲಿ. ಹೀಗಾಗಿ ಅಂದು ಸರ್ಕಾರವೇ ಹೊರಡಿಸಿದ ಆದೇಶದಿಂದ ಅತೀ ಶೀಘ್ರವಾಗಿ ಕೊರೊನಾದಿಂದ ಮೃತಪಟ್ಟ ನೌಕರರ ಕುಟುಂಬದವರಿಗೆ ತಲಾ 30 ಲಕ್ಷ ರೂ.ಗಳ ಚೆಕ್ ವಿತರಿಸಬೇಕು.
ಯಾರದೋ ದ್ವೇಷಕ್ಕೆ ಹತ್ಯೆಯಾದ ವ್ಯಕ್ತಿಗಳ ಕುಟುಂಬದವರಿಗೆ ತಲಾ 25 ಲಕ್ಷ ರೂಪಾಯಿ (ಸಿಎಂ ಪರಿಹಾರ ನಿಧಿಯಿಂದ ಕೊಡುವುದಕ್ಕೇ ಅವಕಾಶವಿಲ್ಲದಿದ್ದರೂ ಸಿಎಂ ಆದವರು ವಿತರಿಸಿದ್ದಾರೆ) ಚೆಕ್ ವಿತರಿಸಿದ್ದಾರೆ. ಅದು ನಿಕಟಪೂರ್ವ ಸಿಎಂ ಬಸವರಾಜ ಬೊಮ್ಮಾಯಿ ಅವರಾಗಿರಬಹುದು ಇಂದಿನ ಸಿಎಂ ಸಿದ್ದರಾಮಯ್ಯ ಅವರಾಗಿರಬಹುದು.
ಅದೇ ರೀತಿ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿ ಮೃತಪಟ್ಟ ಸಾರಿಗೆ ನೌಕರರ ಕುಟುಂಬಕ್ಕೆ ಏಕೆ ವಿತರಸಲು ಮೀನಮೃಷ ಎಣಿಸುತ್ತಿದ್ದಾರೆ ಈ ಸಿಎಂಗಳಾದವರು. ಇವರಿಗೆ ರಾಜಕೀಯವಷ್ಟೇ ಬೇಕಾ? ದ್ವೇಷಕ್ಕಾಗಿ ಕೊಲೆಯಾದವರ ಕುಟುಂಬದವರಿಗೆ ಸಾರ್ವಜನಿಕರ ತೆರೆಗೆ ಹಣ ದುರುಪಯೋಗವಾಗಬೇಕೋ ನಿಷ್ಟೇಯಿಂದ ಸೇವೆ ಸಲ್ಲಿಸುವ ವೇಳೆ ಮೃತಪಟ್ಟವರಿಗೆ ವಿತರಿಸಬೇಕೋ?
ಇಂಥ ಸಿಎಂಗಳು ಇರುವುದರಿಂದಲೇ ರಾಜ್ಯದಲ್ಲಿ ಒಳ್ಳೆಯವರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಬೆಲ ಇಲ್ಲದಂತಾಗಿದೆ. ಅದೇನೆ ಇರಲಿ ಇನ್ನಾದರೂ ಸರ್ಕಾರ ಕೊರೊನಾದಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬದವರಿಗೆ 30 ಲಕ್ಷ ರೂಪಾಯಿ ಪರಿಹಾರ ವಿತರಿಸಲು ಮುಂದಾಗಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.