ದಾವಣಗೆರೆ : ರಾಜ್ಯ ಸರಕಾರ ಸಾರಿಗೆ ನೌಕರರ ವಿಷಯ ಕಾನೂನು ಹೋರಾಟವಾಗದಂತೆ ತಡೆದು, ಮಾನವೀಯತೆ ಆಧಾರದಲ್ಲಿ ಅವರ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಿರಿಗೆರೆ ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವತಿಯಿಂದ ನಗರದ ತ್ರಿಶೂಲ್ ಕಲಾ ಭವನದಲ್ಲಿ ಆಯೋಜಿಸಲಾಗಿದ್ದ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಸಮ್ಮೇಳನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರಾಜ್ಯದ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ 1.30 ಲಕ್ಷ ಉದ್ಯೋಗಿಗಳಿದ್ದಾರೆ. ಹೀಗಾಗಿ ಈ ನೌಕರರ ಕಷ್ಟಗಳ ಬಗ್ಗೆ ಸರಕಾರದ ಜತೆ ಮಾತನಾಡಲು ನಾವು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಇನ್ನು ಸಾರಿಗೆ ನೌಕರರು ನೌಕರಿ ಮಾಡುತ್ತಿಲ್ಲ. ಸೇವೆ ಮಾಡುತ್ತಿದ್ದಾರೆ. ಇವರ ಸೇವೆಗಾಗಿ ಲಾಭ – ನಷ್ಟ ಲೆಕ್ಕಿಸದೇ ಸೂಕ್ತ ವೇತನ ನೀಡುವುದು ಸರಕಾರದ ಹೊಣೆಯಾಗಿದೆ. ಈ ಬಗ್ಗೆ ಸರಕಾರದೊಂದಿಗೆ ಮಾತನಾಡಲು ನನಗೆ ಮುಜುಗರ ಇಲ್ಲ. ಸರಕಾರದ ಅಧಿಕಾರಸ್ಥರ ಜತೆ ಖಾಸಗಿಯಾಗಿ ಮಾತನಾಡುತ್ತೇನೆ ಎಂದು ಶ್ರೀಗಳು ತಿಳಿಸಿದರು.
ಜಗಳೂರು ಶಾಸಕ ಎಸ್. ವಿ. ರಾಮಚಂದ್ರ ಮಾತನಾಡಿ, ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಹೋರಾಟದ ದಾರಿ ಹಿಡಿಯುವುದು ಸರಿಯಾದ ಕ್ರಮವಲ್ಲ, ಇದರಿಂದ ರಾಜ್ಯಕ್ಕೆ ಆರ್ಥಿಕವಾಗಿ ನಷ್ಟವಾಗುವ ಜತೆಗೆ ಜನತೆಗೂ ತೊಂದರೆ ಉಂಟಾಗಲಿದೆ. ಆದ್ದರಿಂದ, ಇನ್ನು ಮುಂದೆ ನೌಕರರು ಮುಷ್ಕರಕ್ಕೆ ಕೈಹಾಕಬೇಡಿ, ಸಮಸ್ಯೆಗಳೇನೇ ಇದ್ದರೂ ತಮ್ಮ ಇಲ್ಲವೇ ಶ್ರೀಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ ಎಂದರು.
ಇನ್ನು ಉಚ್ಚನ್ಯಾಯಾಲಯದ ನ್ಯಾಯವಾದಿ ಪಿ.ಎಚ್. ನೀರಲಕೇರಿ ಮಾತನಾಡಿ, ಸಾರಿಗೆ ನಿಗಮದಲ್ಲಿಯೇ ಅತಿಹೆಚ್ಚು ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಪ್ರತಿಯೊಬ್ಬ ನೌಕರನೂ ಕಾನೂನು ಅರಿವು ಹೊಂದಬೇಕು ಎಂದರು.
ಮಹಾ ಸಮ್ಮೇಳನದ ಸಭಾಂಗಣ ಆಸನಗಳು ತುಂಬಿದ್ದು, ಕೆಲವರಿಗೆ ಕೂರಲು ಜಾಗಸಿಗದೆ ಕಾರ್ಪೆಟ್ ಮೇಲೆ ಕುಳಿತಿದ್ದರು. ನೌಕರರ ಒಗ್ಗಟ್ಟು ನೋಡಿ ಶ್ರೀಗಳು ಹೆಮ್ಮೆಪಟ್ಟರು. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದಲೂ ನೌಕರರು ಆಗಮಿಸಿದ್ದು ಒಗ್ಗಟ್ಟಿನ ಬಿಡಿಸಲಾರದ ನಂಟಿದೆ ಎಂದು ವೇದಿಕೆಯಲ್ಲಿ ಅಭಿಪ್ರಾಯ ವ್ಯಕ್ತವಾಗುತಿತ್ತು.