NEWSನಮ್ಮಜಿಲ್ಲೆನಮ್ಮರಾಜ್ಯ

NWKRTC ಸಂಸ್ಥೆಗೂ ತಟ್ಟಿದ ಕಬ್ಬು ಬೆಳೆಗಾರ ರೈತರ ಹೋರಾಟದ ಬಿಸಿ- ಆದಾಯದಲ್ಲಿ 2 ಕೋಟಿ ರೂ. ನಷ್ಟ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಒಂದು ವಾರದಿಂದ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದ ಬಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಿಗಮಗಳಿಗೂ ತಟ್ಟಿದೆ.

ಪ್ರತಿಭಟನೆ, ರಸ್ತೆ ತಡೆ, ಬಂದ್ ಮತ್ತಿತರ ಕಾರಣಕ್ಕೆ ಬಸ್‌ಗಳ ಕಾರ್ಯಾಚರಣೆ ಸರಿಯಾಗಿ ಮಾಡಲಾಗಿಲ್ಲ. ಇತ್ತ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡಿತ್ತು ಇದರ ಜತೆಗೆ ಮತ್ತಿತರ ಕಾರಣಗಳಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗಕ್ಕೆ 1.76 ಕೋಟಿ ರೂ. ಬೆಳಗಾವಿ ವಿಭಾಗಕ್ಕೆ 28 ಲಕ್ಷ ರೂ. ಸೇರಿದಂತೆ ಒಟ್ಟು 2.04 ಕೋಟಿ ರೂಪಾಯಿ ಆರ್ಥಿಕ ನಷ್ಟವಾಗಿದೆ.

ಇದರ ನಡುವೆ ಕೆಲ ಮಾರ್ಗಗಳಲ್ಲಿ ನಿಗಮದ ಬಸ್‌ಗಳ ಸಂಚಾರ ಸ್ಥಗಿತವಾಗಿದ್ದರಿಂದ ಪ್ರಯಾಣಿಕರ ಪರದಾಟ ಮುಂದುವರಿದಿತ್ತು. ಇಂದು ಶನಿವಾರ ಇದೇ ಸ್ಥಿತಿ ಇದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಚಿಕ್ಕೋಡಿ ವಿಭಾಗದಲ್ಲಿ ಪ್ರತಿದಿನ 669 ಬಸ್ ಕಾರ್ಯಾಚರಣೆ ಮಾಡಲಾಗುತ್ತದೆ. ಆದರೆ, ಹೋರಾಟದಿಂದ ಸದ್ಯ ಎಲ್ಲ ಬಸ್‌ಗಳ ಕಾರ್ಯಾಚರಣೆ ಮಾಡುತ್ತಿರಲಿಲ್ಲ. ಜತೆಗೆ ಮಾರ್ಗ ಬದಲಾವಣೆ ಮಾಡಿ ಓಡಿಸಿದರೂ ಹೆಚ್ಚಿನ ಪ್ರಯಾಣಿಕರಿಲ್ಲದೆ ಬಸ್‌ಗಳು ಖಾಲಿಯಾಗಿಯೇ ಓಡುತ್ತಿದ್ದವು.

ಹೀಗಾಗಿ 2025ರ ಅಕ್ಟೋಬರ್‌ನಲ್ಲಿ ಬಸ್‌ಗಳ ಕಾರ್ಯಾಚರಣೆಯಿಂದ ದಿನಕ್ಕೆ 11.30 ಕೋಟಿ ರೂ. ಆದಾಯ ಬರುತ್ತಿದ್ದದ್ದು ಗುರುವಾರ 84 ಲಕ್ಷ ರೂ.ಗಳಷ್ಟೇ ಬಂದಿದೆ ಎಂದು ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗೀಯ ಸಂಚಾರ ಅಧಿಕಾರಿ ಎ.ಆರ್.ಛಬ್ಬಿ ತಿಳಿಸಿದ್ದಾರೆ.

ಇತ್ತ ನಿರೀಕ್ಷಿತ ಆದಾಯವಿಲ್ಲ: ಬೆಳಗಾವಿ ವಿಭಾಗದಲ್ಲೂ ನಿತ್ಯ 640 ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಅನ್ನದಾತರ ಹೋರಾಟದ ಹಿನ್ನೆಲೆಯಲ್ಲಿ ಕೆಲ ಮಾರ್ಗಗಳಲ್ಲಿ ಬಸ್‌ಗಳ ಕಾರ್ಯಾಚರಣೆಗೆ ತೊಡಕಾಗಿದ್ದರಿಂದ ಗುರುವಾರ ಸೇರಿದಂತೆ ಕಳೆದ ಒಂದು ವಾರದಿಂದ ನಿರೀಕ್ಷಿತ ಆದಾಯ ಬರಲಿಲ್ಲ ಎಂದು ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಲ್.ಗುಡೆನ್ನವರ ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!