ಬೆಂಗಳೂರು: ವೇತನ ಆಯೋಗ ಮಾದರಿಯಲ್ಲಿ ವೇತನ ಹೆಚ್ಚಳ ಮಾಡಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಮಾ.1ರಿಂದ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದು ಸಂಜೆ ಕೈ ಬಿಡುವುದು ಬಹುತೇಕ ಖಚಿತವಾಗಿದೆ.
ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಹೀಗಾಗಿ ನಮ್ಮ ಬೇಡಿಕೆ ಈಡೇರುವವರೆಗೂ ನಾವು ಧರಣಿ ಕೈ ಬಿಡುವುದಿಲ್ಲ ಎಂದು ಹೇಳಿದ ವೇದಿಕೆಯ ಪದಾಧಿಕಾರಿಗಳು ನಿನ್ನೆ (ಮಾ.3) ತುರ್ತು ಸಭೆ ನಡೆಸಿ ಮುಷ್ಕರ ಮಾಡುವ ಬಗ್ಗೆ ನಿರ್ಧಸಿದ್ದು, ಈ ಹಿನ್ನೆಲೆಯಲ್ಲಿ ಈ ಧರಣಿ ಸತ್ಯಾಗ್ರಹವನ್ನು ಇಂದು ಕೈ ಬಿಟ್ಟು, ಮುಂದೆ ಮುಷ್ಕರದ ಬಗ್ಗೆ ಸಜ್ಜಾಗಲು ತೀರ್ಮಾನಿಸಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಮುಷ್ಕರಕ್ಕೆ ಹೋಗುವುದಕ್ಕೂ ಮುನ್ನ 14 ದಿನಗಳ ಮುಂಚಿತವಾಗಿ ಕಾರ್ಮಿಕ ಇಲಾಖೆಗೆ ಮುಷ್ಕರ ಸಂಬಂಧ ಮನವಿ ಸಲ್ಲಿಸಬೇಕು, ಆ ಬಳಿಕ ಕಾರ್ಮಿಕ ಇಲಾಖೆ ಆಯುಕ್ತರು ಬೇಡಿಕೆ ಸಂಬಂಧ ಸರ್ಕಾರ ಮತ್ತು ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿ ಅದು ಫಲಪ್ರದವಾದರೆ ಮುಷ್ಕರ ಮಾಡಲು ಕೊಟ್ಟ ದಿನಾಂಕಕ್ಕೂ ಮುನ್ನ ನೌಕರರಿಗೆ ಸಿಹಿ ಸುದ್ದಿ ನೀಡಬಹುದು.
ಒಂದು ವೇಳೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮತ್ತು ಆಡಳಿತ ಮಂಡಳಿ ಒಪ್ಪದಿದ್ದರೆ ಮುಷ್ಕರ ಮಾಡುವ ಎಲ್ಲ ಅವಕಾಶಗಳನ್ನು ಇಲಾಖೆ ಅನುವು ಮಾಡಿಕೊಡುವುದು ಅನಿವಾರ್ಯವಾಗಲಿದೆ. ಕಾರಣ ದೇಶದ ಯಾವುದೆ ಪ್ರಜೆಯು ತಮ್ಮ ಬೇಡಿಕೆ ಪೂರೈಸಿಕೊಳ್ಳಲು ಕಾನೂನು ವ್ಯಾಪ್ತಿಯೊಳಗೆ ಹೋರಾಟ ಮಾಡುವುದಕ್ಕೆ ಅವಕಾಶವಿದೆ.
ಇನ್ನು ಬರುವ ಸೋಮವಾರ ಅಂದರೆ ಮಾ.6ರಂದು ಮುಷ್ಕರ ಮಾಡುವ ಸಂಬಂಧ ಕಾರ್ಮಿಕ ಇಲಾಖೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಬಳಿಕ 14ದಿನಗಳ ಕಾಲ ಕಾದು ನೋಡಿ ಅಲ್ಲಿಯವರೆಗೂ ಯಾವುದೇ ತೀರ್ಮಾನ ತೆಗೆದುಕೊಳ್ಳದಿದ್ದರೆ ನೌಕರರ ವೇದಿಕೆ ಮಾ.21ರ ಬಳಿಕ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಈ ನಡುವೆ ಸಾರಿಗೆ ನೌಕರರ ವಿವಿಧ ಸಂಘಟನೆಗಳಲ್ಲಿ ಒಗ್ಗಟ್ಟಿನ ಕೊರತೆ ಇದ್ದು, ನೌಕರರು ತಮ್ಮ ತಮ್ಮ ಸಂಘಟನೆಗಳ ಪರ ಬ್ಯಾಟ್ ಬೀಸುತ್ತಿದ್ದಾರೆ. ಇದರಿಂದಾಗಿ ಎಂದೋ ಬಗೆಹರಿಯಬೇಕಾದ ಸಮಸ್ಯೆ 4ವರ್ಷಗಳಾಗುತ್ತಿರೂ ಈವರೆಗೂ ಸಮಸ್ಯೆಯಾಗಿಯೇ ಉಳಿದಿದೆ.
ಇನ್ನು ಒಂದುವೇಳೆ ಮಾರ್ಚ್ 21ರ ನಂತರ ಸಮಾನ ಮನಸ್ಕರ ವೇದಿಕೆ ಮುಷ್ಕರಕ್ಕೆ ಕರೆ ನೀಡಿದರೆ ಇತರ ಸಂಘಟನೆಗಳ ನೌಕರರು ಡ್ಯೂಟಿಗೆ ಹಾಜರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಸರ್ಕಾರ ಮತ್ತು ಆಡಳಿತ ಮಂಡಳಿ ತಲೆ ಕೆಡಿಸಿಕೊಳ್ಳದೆ ನೌಕರರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದೆ ಎಂಬುದರಲ್ಲೂ ಎರಡನೆಯ ಮಾತಿಲ್ಲ.