ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಮಡಿಕೇರಿ: ದೇಶದಲ್ಲಿ ಯೋಧರ ಬಗ್ಗೆ ಅಪಾರವಾದ ಕಾಳಜಿ ಹಾಗೂ ಗೌರವವಿದೆ. ದೇಶ ಕಾಯುವ ಸೈನಿಕರಿಗೆ ಅವಶ್ಯಬಿದ್ದಾಗ ಒಂದಲ್ಲ ಒಂದು ರೀತಿಯಲ್ಲಿ ನಮ್ಮಿಂದ ಸಾಧ್ಯವಾಗುವ ಅಳಿಲ ಸೇವೆ ಕೂಡ ಮಾಡುತ್ತಿರುತ್ತೇವೆ. ಆದರೆ ಯೋಧನ ವಿಷಯದಲ್ಲಿ KSRTC ಬಸ್ಸೊಂದರ ಚಾಲಕ ಹಾಗೂ ನಿರ್ವಾಹಕರು ಏಕೋ ಸ್ವಲ್ಪ ಮಾನವೀಯತೆ ಮರೆತ್ತಂತೆ ಕಾಣುತ್ತಿದೆ.
ಮನವಿ ಮಾಡಿದರೂ ಕೂಡ ರಿಕ್ವೆಸ್ಟ್ ಸ್ಟಾಪ್ ಕೊಡದ ಕಾರಣ, ಯೋಧರೊಬ್ಬರು ನಡುರಾತ್ರಿ 2 ಕಿಮೀ ಗಿಂತಲೂ ಹೆಚ್ಚು ದೂರ ನಡೆದು ಮನೆ ಸೇರಿದ್ದಾರೆ.
ಆ ರಾತ್ರಿ ನಡೆದಿದ್ದಿಷ್ಟು: ತ್ರಿಪುರದಲ್ಲಿ ಕರ್ತವ್ಯದಲ್ಲಿರುವ ಕೊಡಗು ಜಿಲ್ಲೆಯ ಯೋಧರೊಬ್ಬರು ರಜೆಯಲ್ಲಿ ಅಲ್ಲಿಂದ ನಾಲ್ಕು ದಿನ ನಿದ್ದೆಗೆಟ್ಟು ಕೊಡಗಿಗೆ ಬಂದಿದ್ದಾರೆ. ಮೊನ್ನೆ ದಿನ ತುರ್ತಾಗಿ ಉಡುಪಿಗೆ ತೆರಳಿದ್ದವರು ಸಂಜೆ ಮಂಗಳೂರಿಗೆ ಹಿಂತಿರುಗಿ ಅಲ್ಲಿಂದ KSRTC ಬಸ್ಸಿನಲ್ಲಿ ಮಡಿಕೇರಿಗೆ ಪ್ರಯಾಣಿಸಿದ್ದಾರೆ.
ಆಗ ತಡರಾತ್ರಿಯಾಗಿದ್ದ ಕಾರಣ ಊರಿಗೆ ತಲುಪುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಸುದರ್ಶನ ಸರ್ಕಲ್ ಬಳಿಯಲ್ಲಿರುವ ಸಹೋದರನ ಮನೆಗೆ ಹೋಗಲು ನಿರ್ಧರಿಸಿದ್ದಾರೆ. ಬಸ್ ಮಡಿಕೇರಿ ನಿಲ್ದಾಣ ತಲುಪಿದಾಗ ಚಾಲಕ ಹಾಗೂ ನಿರ್ವಾಹಕನ ಬಳಿ ಸುದರ್ಶನ ಸರ್ಕಲ್ ಬಳಿ ಬಸ್ ನಿಲ್ಲಿಸುವಂತೆ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಇವರಿಬ್ಬರು ನಿರಾಕರಿಸಿದ್ದಾರೆ.
ಈ ವೇಳೆ ತಾನು ಮಿಲಿಟರಿಯವನು ಎಂದು ತಿಳಿಸಿದರೂ ಕೂಡ ಚಾಲನಾ ಸಿಬ್ಬಂದಿ ಒಪ್ಪಲಿಲ್ಲ. ಸುಂಟಿಕೊಪ್ಪಕ್ಕೆ ಟಿಕೆಟ್ ತೆಗೆದು ಕೊಳ್ಳುವುದಾಗಿ ಹೇಳಿದರೂ ಕೂಡ ಬಸ್ ನಿಲ್ಲಿಸಲು ಆಗುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ. ಕೊನೆಗೆ ವಿಧಿ ಇಲ್ಲದೆ ಮಧ್ಯರಾತ್ರಿ ಮಡಿಕೇರಿ ಬಸ್ ನಿಲ್ದಾಣದಲ್ಲೇ ಇಳಿದ ಇಳಿದ ಸುದರ್ಶನ ಸರ್ಕಲ್ ವರೆಗೆ ನಡೆದುಕೊಂಡೇ ಹೋಗಿ ಸಹೋದರನ ಮನೆ ತಲುಪಿದ್ದಾರೆ.

ಇನ್ನು ಈ ಯೋಧರಿಗೆ ಹಗಲಿರುಳು ನಡೆದುಕೊಂಡು ಹೋಗುವುದು ಪ್ರಯಾಸವಲ್ಲ. ಅದೇ ರೀತಿ ನಿಯಮ ಪ್ರಕಾರ ಮಾರ್ಗಮಧ್ಯದಲ್ಲಿ ಬಸ್ ನಿಲ್ಲಿಸಲು ಅವಕಾಶವಿಲ್ಲ ಆದರೂ ಮುಂದಿನ ಊರಿಗೆ ಟಿಕೆಟ್ ನೀಡಿಯಾದರೂ ಯೋಧನನ್ನು ಮಾನವೀಯತೆ ದೃಷ್ಟಿಯಿಂದ ಬಸ್ ಸಾಗುವ ಮಾರ್ಗಮಧ್ಯೆ ಇರುವ ಸುದರ್ಶನ್ ಸರ್ಕಲ್ ಬಳಿ ಇಳಿಸಬಹುದಿತ್ತು.
ದೇಶದ ಹಲವೆಡೆ ಊರಿಗೆ ರಜೆಯಲ್ಲಿ ತೆರಳಿದ್ದ ಯೋಧರನ್ನು ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ರಜೆ ಮೊಟಕುಗೊಳಿಸಿ ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ಉತ್ತರಾಖಂಡದಲ್ಲಿ ಯೋಧರಿಗೆ ಟ್ಯಾಕ್ಸಿ ಚಾಲಕರು 50% ರಿಯಾಯಿತಿಯನ್ನು ನೀಡುತ್ತಿದ್ದಾರೆ.
ಕೆಲವೆಡೆ ಉಚಿತ ಸೇವೆಯನ್ನು ಸಹ ನೀಡಲಾಗುತ್ತಿದೆ. ಸೈನಿಕರಿಗಾಗಿ ಸೀಟುಗಳನ್ನು ಕಾಯ್ದಿರಿಸಲಾಗಿದೆ. ಇವೆಲ್ಲ ಪ್ರಚಾರಗೊಳ್ಳದ ಮೌನ ಸೇವೆಗಳಾಗಿವೆ. ಆದರೆ.. ನಮ್ಮೂರಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ ಎಂದು ಯೋಧ ಬೇಸರ ವ್ಯಕ್ತ ಪಡಿಸಿದ್ದಾರೆ.
ಅಲ್ಲದೇ ಇನ್ನು ಮುಂದಾದರೂ KSRTC ಚಾಲಕರು ಮತ್ತು ನಿರ್ವಾಹಕರು ಯೋಧರೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತಾಗಲಿ ಎಂದು ಆಶಿಸಿರುವ ಯೋಧ ಕ್ಯೂಟ್ ಕೂರ್ಗ್ ನೊಂದಿಗೆ ಮೇ 9ರಂದು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
Related
