ಚೆನ್ನೈ: ಹೆಚ್ಚಿನ ಇಳುವರಿ ನೀಡುವ ಭತ್ತದ ತಳಿ ಸಂಶೋಧನೆ ಮಾಡಿದ್ದ ಭಾರತದ ಹೆಸರಾಂತ ಕೃಷಿ ವಿಜ್ಞಾನಿ ಮತ್ತು ದೇಶದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ (98) ಅವರು ವಯೋಸಹಜ ಕಾಯಿಲೆಯಿಂದ ಗುರುವಾರ ಕೊನೆಯುಸಿರೆಳೆದಿದ್ದಾರೆ.
ಇಂದು ಚೆನ್ನೈನಲ್ಲಿ ವಿಧಿವಶರಾದ ಎಂ.ಎಸ್. ಸ್ವಾಮಿನಾಥನ್ ಅವರು 7 ಆಗಸ್ಟ್ 1925ರಂದು ಜನಿಸಿದ್ದರು. ಭಾರತದ ಹಸಿರು ಕ್ರಾಂತಿಯ ಪಿತಾಮಹ ಅಂತಾನೇ ಖ್ಯಾತಿ ಪಡೆದಿದ್ದ ಸ್ವಾಮಿನಾಥನ್ ಅವರು ಚೆನ್ನೈನಲ್ಲಿ ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್ ಸ್ಥಾಪಿಸಿದ್ದರು. ಸ್ವಾಮಿನಾಥನ್ ಪುತ್ರಿ ಸೌಮ್ಯ ಅವರು WHOದಲ್ಲಿ ವಿಜ್ಞಾನಿಯಾಗಿದ್ದರು.
ಮೃತರು ಪತ್ನಿ ಮಿನಾ ಮತ್ತು ಮೂವರು ಪುತ್ರಿಯರಾದ ಸೌಮ್ಯ, ಮಧುರಾ ಮತ್ತು ನಿತ್ಯಾ ಅವರನ್ನು ಅಗಲಿದ್ದಾರೆ. 1960 ಮತ್ತು 1970ರ ದಶಕಗಳಲ್ಲಿ ಸ್ವಾಮಿನಾಥನ್ ಅವರ ಅದ್ಭುತ ಕೆಲಸವು ಭಾರತೀಯ ಕೃಷಿಯಲ್ಲಿ ಕ್ರಾಂತಿಯನ್ನೇ ಮಾಡಿತು. ಭಾರತವು ವ್ಯಾಪಕವಾದ ಬರಗಾಲದಿಂದ ಹೊರಬರಲು ಮತ್ತು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಸ್ವಾಮಿನಾಥನ್ ಅವರ ಸಾಧನೆ ನೆರವಾಯಿತು.
ಸ್ವಾಮಿನಾಥನ್ ಅವರ ಸೇವೆಯನ್ನು ಪರಿಗಣಿಸಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದಲ್ಲಿ ಅವರಿಗೆ “ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ” ಎಂದು ಬಿರುದು ನೀಡಿತು. ಸ್ವಾಮಿನಾಥನ್ ಅವರು ತಮ್ಮ ಪ್ರಯತ್ನದಿಂದಾಗಿ ಗೋಧಿ ಮತ್ತು ಅಕ್ಕಿಯ ಹೆಚ್ಚಿನ ಇಳುವರಿಯ ತಳಿಗಳನ್ನು ಅಭಿವೃದ್ಧಿ ಪಡೆಸಿದರು. ಇವು ಭಾರತದಾದ್ಯಂತ ಆಹಾರ ಧಾನ್ಯ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿತು.