ಬೆಳಗಾವಿ/ ಹುಬ್ಬಳ್ಳಿ: ಬೆಳಗಾವಿಯ ಸುವರ್ಣಸೌಧದ ಮುಂದೆ ಕಳೆದ 7ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾರಿಗೆ ನೌಕರರನ್ನುಭಾನುವಾರ ಸಂಜೆ 7ಗಂಟೆ ಸುಮಾರಿಗೆ ಪೊಲೀಸರು ಬಂಧಿಸಿ ಧಾರವಾಡ ಮಾರ್ಗವಾಗಿ ಕರೆದುಕೊಂಡು ಹೋಗಿ ಬಳಿಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಆ ನಂತರ ಹುಬ್ಬಳ್ಳಿ ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾರೆ.
ಸುಮಾರು ಸಂಜೆ 7 ಗಂಟೆಯಿಂದ ರಾತ್ರಿ 11.40ರ ವರೆಗೆ ಪೊಲೀಸ್ ವಾಹನದಲ್ಲೇ ಕೂರಿಸಿಕೊಂಡು ಸುತ್ತಿಸಿದ ಬಳಿಕ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣಾ ಮಾಡಿಸಿ ಆ ಬಳಿಕ ಬಸ್ ನಿಲ್ದಾಣದಲ್ಲಿ 11.40ರ ಸುಮಾರಿಗೆ ಬಿಟ್ಟು ಹೋದರು.
ನಮ್ಮನ್ನು ಮಧ್ಯರಾತ್ರಿ ತಂದು ಬಸ್ ನಿಲ್ದಾಣದಲ್ಲಿ ಪೊಲೀಸರು ಬಿಟ್ಟು ಹೋದರು. ನಾವು ಉಪವಾಸ ಸತ್ಯಾಗ್ರಹ ಕುಳಿತಿದ್ದವರು, ಅವರು ನಮ್ಮನ್ನು ಸುತ್ತಾಟಿಸಿ ಬಳಿಕ ಬಿಟ್ಟು ಹೋದ್ದರಿಂದ ನಮಗೆ ನಿಲ್ಲುವುದು ಕೂಡ ಕಷ್ಟವಾಗುತ್ತಿತ್ತು.
ಆದರೂ ನಮ್ಮ ಸಹೋದ್ಯೋಗಿಗಳಿಗೆ ಫೋನ್ ಕರೆ ಮಾಡಿ ಆ ಮಧ್ಯರಾತ್ರಿಯಲ್ಲೇ ಮತ್ತೆ ಸತ್ಯಾಗ್ರಹ ನಿರತ ಬೆಳಗಾವಿಯ ಸುವರ್ಣಸೌಧದ ಬಳಿಗೆ ಬಾಡಿಗೆ ವಾಹನಗಳನ್ನು ಮಾಡಿಕೊಂಡು ವಾಪಸ್ ಬಂದೆವು ಎಂದು ನೌಕರರು ನಡೆದ ಘಟನೆಯನ್ನು ವಿವರಿಸಿದರು.
ಸೋಮವಾರ ಸಾರಿಗೆ ನೌಕರರು ಕರೆ ನೀಡಿರುವ ಬೃಹತ್ ಉಪವಾಸ ಸತ್ಯಾಗ್ರಹದಲ್ಲಿ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಮತ್ತು ಕುಟುಂಬ ಸದಸ್ಯರು ಭಾಗವಹಿಸುತ್ತಾರೆ ಎಂಬುದನ್ನು ಅರಿತ ಸರ್ಕಾರ ಪೊಲೀಸರನ್ನು ಬಿಟ್ಟು ಸತ್ಯಾಗ್ರಹ ನಿರತ ನೌಕರರು ಬಂಧಿಸುವ ಹುನ್ನಾರ ನಡೆಸಿತು.
ಈ ಸತ್ಯಾಗ್ರಹ ನಿರತರನ್ನು ಬಂಧಿಸಿದರೆ ಬೆಳಗಾವಿಗೆ ಬರಬೇಕು ಎಂದುಕೊಳ್ಳುತ್ತಿರುವ ನೌಕರರು ವಿಚಲಿತರಾಗಿ ಬರುವುದಿಲ್ಲ ಎಂಬ ಲೆಕ್ಕಾಚಾರವನ್ನು ಹಾಕಿಕೊಂಡು ಸರ್ಕಾರ ನೌಕರರನ್ನು ಬಂಧಿಸಿತು. ಆದರೆ ಬಂಧಿಸಿದ್ದರಿಂದಲೇ ಸಿಟ್ಟಗೆದಿರುವ ನೌಕರರು ಸಾಹಸ್ರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯದ ವಿವಿಧೆಡೆಗಳಿಂದ ಆಗಮಿಸುತ್ತಿರುವ ನೌಕರರು ಸೋಮವಾರ ಬೆಳಗ್ಗೆ 10 ಗಂಟೆ ಬಳಿಕ ಸಮಾವೇಶಗೊಂಡು ಸರ್ಕಾರದ ಚಳಿ ಬಿಡಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು ಈ ಸತ್ಯಾಗ್ರಹಕ್ಕೆ ಐಪಿಎಸ್ ಮಾಜಿ ಅಧಿಕಾರಿ ಭಾಸ್ಕರ್ ರಾವ್ ಅವರು ಆಗಮಿಸುತ್ತಿದ್ದು ಬೃಹತ್ ಮಟ್ಟದಲ್ಲಿ ಹೋರಾಟ ನಡೆಯಲಿದೆ ಎನ್ನಲಾಗುತ್ತಿದೆ.
ಈಗಾಗಲೇ ಸಾವಿರಾರು ಮಂದಿ ನೌಕರರು ಮತ್ತು ಕುಟುಂಬ ಸದಸ್ಯರು ಬೆಳಗಾವಿಗೆ ಬಸ್‌ಗಳು, ರೈಲುಗಳ ಮೂಲಕ ಮತ್ತು ಸ್ವಂತ ಹಾಗೂ ಬಾಡಿಗೆ ವಾಹನಗಳಲ್ಲಿ ಬಂದು ತಲುಪುತ್ತಿದ್ದಾರೆ.