ಚಿಕ್ಕಬಳ್ಳಾಪುರ: ಬೆಳ್ಳಂಬೆಳ್ಳಗ್ಗೆ ನಂದಿಗಿರಿಧಾಮದತ್ತ ಹೊರಟಿದ್ದ ಪ್ರವಾಸಿಗರಿಗೆ ಅಚ್ಚರಿಯ ನಿರಾಸೆಯಾಗಿದೆ. ಹೀಗಾಗಿ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಪ್ರವಾಸಿಗರು ಅದೇ ದಾರಿಯಲ್ಲೇ ಹಿಂದಕ್ಕೆ ಹೋಗಿದ್ದಾರೆ.
ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿರುವ ಹಿನ್ನೆಲೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿ ಹಿಲ್ಸ್ಗೆ ನಿರ್ಬಂಧ ಹೇರಲಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ಭದ್ರತಾ ದೃಷ್ಟಿಯಿಂದ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.
ಹೀಗಾಗಿ ಈ ವಿಚಾರ ತಿಳಿಯದೇ ಆಗಮಿಸಿದ್ದ ಪ್ರವಾಸಿಗರನ್ನು ಪೊಲೀಸರು ತಡೆದಿದ್ದಾರೆ. ನಂದಿಗಿರಿಧಾಮ ಬುಡದ ಪ್ರವೇಶ ದ್ವಾರದಲ್ಲೇ ವಾಹನಗಳನ್ನು ತಡೆದು ಪ್ರವಾಸಿಗರನ್ನು ವಾಪಸ್ ಕಳಿಸುತ್ತಿದ್ದಾರೆ. ಇದರಿಂದ ರಜೆಯ ಮಜ ಸವಿಯಲು ಬಂದಿದ್ದ ಪ್ರವಾಸಿಗರು ನಿರಾಸೆಯಿಂದಲೇ ವಾಪಸ್ ಹೋಗಿದ್ದಾರೆ.
ಮುದ್ದೇನಹಳ್ಳಿಗೆ ರಾಷ್ಟ್ರಪತಿ: ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮುದ್ದೇನಹಳ್ಳಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.
ಜಿಲ್ಲಾಧಿಕಾರಿ ರವೀಂದ್ರ ಅವರು ನಂದಿಗಿರಿಧಾಮಕ್ಕೆ 2 ದಿನಗಳ ಕಾಲ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ. ಹಾಗಾಗಿ ಪ್ರವಾಸಿಗರಿಗೆ ನಂದಿ ಹಿಲ್ಸ್ ವಿಕ್ಷಣೆ ಇನ್ನೆರಡು ದಿನ ಸಾಧ್ಯವಿಲ್ಲ.