Breaking NewsNEWSನಮ್ಮರಾಜ್ಯಲೇಖನಗಳು

ಕಿವುಡ ಸಾರಿಗೆ ಮಂತ್ರಿ: KSRTC ನೌಕರರ ವೇತನ ಹೆಚ್ಚಳ ಬಗ್ಗೆ ಪ್ರಶ್ನಿಸಿದರೆ ಲಾರಿ ಮುಷ್ಕರದ ಉತ್ತರ ಕೊಟ್ಟ ಮಂತ್ರಿ ಕಿವಿ ಏಕೋ ಇಂದು ಮಂದವಾಯಿತಲ್ಲ!!!

ವಿಜಯಪಥ ಸಮಗ್ರ ಸುದ್ದಿ
  • ಸಾರಿಗೆ ನೌಕರರ ವೇತನದ ಬಗ್ಗೆ ಕೇಳಿದರೆ ಲಾರಿ ಮುಷ್ಕರದ ಬಗ್ಗೆ ಮಾತನಾಡಿದ ರಾಮಲಿಂಗಾರೆಡ್ಡಿ
  • ಹಿಂದಿನ ಬಿಜೆಪಿ ಸರ್ಕಾರದ ಹಳೇ ಕಥೆ 5800 ಕೋಟಿ ರೂ.ಬಿಟ್ಟು ಹೊರಬರುತ್ತಿಲ್ಲ ಮಂತ್ರಿ
  • ಮಾನಮರ್ಯಾದೆ ಇರದ ಸರ್ಕಾರಕ್ಕೆ ಎಷ್ಟೇ ಉಗಿದರೂ ನಾಚಿಕೆ ಅನ್ನೋದೆ ಆಗುತ್ತಿಲ್ಲ

ಈಗ ನಾವು ಬಸ್‌ ನಿಲ್ಲಿಸಿ ಮುಷ್ಕರ ಮಾಡುವುದಕ್ಕೆ ಬೆಂಬಲ ಕೊಡುವುದಿಲ್ಲ ಎಂದು ಹೇಳುತ್ತಿರುವ ಅಧಿಕಾರಿಗಳು ಕೂಡ ನಿಮ್ಮ ವಿರುದ್ಧ ತಿರುಗಿ ಬೀಳುವುದಕ್ಕೂ ಸಜ್ಜಾಗುತ್ತಿದ್ದಾರೆ ಇದನ್ನು ನೆನಪಿಡಿ

ಕೊಪ್ಪಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಸಂಬಂಧ ಮಾಧ್ಯಮ ಮಿತ್ರರು ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ ಅವರನ್ನು ಕೇಳಿದರೆ ಅವರು ಲಾರಿ ಮುಷ್ಕರದ ಬಗ್ಗೆ ಉತ್ತರ ನೀಡಿದ್ದಾರೆ.

ಇಂದು ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಅವರೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಬಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ವೇಳೆ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಯಾವಾಗ ಮಾಡುತ್ತೀರಿ ಎಂದು ಸುದ್ದಿಗಾರರು ಪ್ರಶ್ನೆ ಮಾಡಿದರು. ಆದರೆ ಆ ಪ್ರಶ್ನೆಗೆ ಜಾಣಕಿವುಡರಾದ ಸಾರಿಗೆ ಮಂತ್ರಿ ಲಾರಿ ಮುಷ್ಕರ ಮಾಡದಂತೆ ಈಗಾಗಲೇ ಮಾತನಾಡಿದ್ದೇವೆ ಎಂದು ಸಂಬಂಧವಿಲ್ಲದ ಉತ್ತರ ನೀಡಿದರು.

ಇನ್ನು ಸಾರಿಗೆ ಅಧಿಕಾರಿಗಳು/ನೌಕರರಿಗೆ 2020ರ ಜನವರಿ 1ರಿಂದ ಅನ್ವಯವಾಗುವಂತೆ ಹೆಚ್ಚಳವಾಗಿರುವ ಶೇ.15ರಷ್ಟು ವೇತನದ 38 ತಿಂಗಳ ಹಿಂಬಾಕಿ ಕೊಡಬೇಕಿದೆ. ಜತೆಗೆ 2024ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡುವುದು ಬಾಕಿ ಉಳಿದೆ. ಅಲ್ಲದೆ ಇದರ 15 ತಿಂಗಳ ವೇತನ ಹಿಂಬಾಕಿಯೂ ಕೂಡ ಈ ತಿಂಗಳು ಘೋಷಣೆ ಮಾಡಿದರೂ ಕೊಡಬೇಕಾಗುತ್ತದೆ.

ಆದರೆ, ಈ ಸಂಬಂಧ ಮಾತನಾಡಬೇಕಿರುವ ಮಂತ್ರಿ ಕಿವಿ ಕೇಳದಂತೆ ನಾಟಕವಾಡಿರುವುದನ್ನು ಗಮನಿಸಿದರೆ ಸಾರಿಗೆ ನೌಕರರಿಗೆ ಕಾನೂನು ಬದ್ಧವಾಗಿ ಕೊಡಬೇಕಿರುವುದನ್ನು ಕೊಡುವಂತೆ ಕಾಣಿಸುತ್ತಿಲ್ಲ ಎನ್ನುವುದು ಸ್ಪಷ್ಟ.

ಇನ್ನು ಇದೇ ಏ.5ರಂದು ಸಿಎಂ ಅಧ್ಯಕ್ಷತೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕರೆದಿದ್ದ ಸಾರಿಗೆ ನೌಕರರ ಸಂಘಟನೆಗಳ ಸಭೆಯನ್ನು ಯಾವುದೇ ಸೂಚನೆ ನೀಡದೆ ಮುಂದೂಡಿದ್ದು, ಇದಕ್ಕೂ ಮೊದಲೇ ಈ ಸಾರಿಗೆ ಮಂತ್ರಿ ಉತ್ತರ ಕರ್ನಾಟಕ ಭಾಗಕ್ಕೆ ಪ್ರವಾಸ ಹೊರಟರು. ಇದೆಲ್ಲವನ್ನು ಗಮನಿಸಿದರೆ ನೌಕರರನ್ನು ಏನು ಮಾಡಲು ಹೊರಟಿದ್ದಾರೆ ಎಂಬುವುದೇ ಉಕ್ಷಪ್ರಶ್ನೆಯಾಗಿದೆ.

ಇದರ ಜತೆಗೆ ನೌಕರರ ಸಂಘಟನೆಗಳ ಪದಾಧಿಕಾರಿಗಳು ಕೂಡ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರೆ ಮತ್ತೊಂದೆಡೆ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬ ರೀತಿ ಸಾರಿಗೆ ಅಧಿಕಾರಿ ವರ್ಷ ನಡೆದುಕೊಳ್ಳುತ್ತಿದೆ. ಹೀಗಾಗಿ ಸರ್ಕಾರ ಜಾಣ ಮೌನದಲ್ಲೇ ತಾನು ನೌಕರರಿಗೆ ಕಾನೂನು ಬದ್ಧವಾಗಿ ಕೊಡಬೇಕಿರುವುದನ್ನು ಕೊಡದೆ  ಮುಂದುವರಿಯುತ್ತಿದೆ.

ಇನ್ನು ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಹಾಗೂ ಹಿಂಬಾಕಿ ಕುರಿತು ಪ್ರಶ್ಮಿಸಿದರೆ ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ ಅವರು ರೆಡಿಮೆಡ್‌ ಉತ್ತರ ಕೊಡುತ್ತಾರೆ. ಹಿಂದಿನ ಬಿಜೆಪಿ ಸರ್ಕಾರ 5800 ಕೋಟಿ ರೂ. ಹೊರೆ ಹಾಕಿ ಹೋಗಿದೆ ಎಂದು.

ಆದರೆ, ಈ 5800 ಕೋಟಿ ರೂಪಾಯಿ 1.25 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿರುವ ಸರ್ಕಾರಕ್ಕೆ ಭಾರಿ ಹೊರೆಯಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಅಲ್ಲದೆ ಈ ಸಬೂಬು ಹೇಳಿಕೊಂಡು ಈ 5 ವರ್ಷವನ್ನು ಕಳೆಯುವ ಹುನ್ನಾರವೇನಾದರೂ ಈ ಸಾರಿಗೆ ಮಂತ್ರಿ ಮಾಡುತ್ತಿದ್ದಾರೆತಯೇ ಎಂಬ ಅನುಮಾನಕೂಡ ಕಾಡುತ್ತಿದೆ.

ಇನ್ನು ನೀವು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದು ಸಾಕು ನೀವು ಬಂದು 2ವರ್ಷ ಆಗುತ್ತಿದೆ ಇನ್ನಾದರೂ ಸಬೂಬು ಹೇಳುವುದು ಬಿಟ್ಟು ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯಗಳನ್ನು ಕೊಡುವತ್ತ ಗಮನಕೊಡಿ.

ಇನ್ನೊಂದು ಪ್ರಮುಖವಾದ ವಿಷಯ 2000 ಬಸ್‌ಗಳನ್ನು ಜನರ ಅನುಕೂಲಕ್ಕಾಗಿ ಖರೀದಿಸುತ್ತೇವೆ ಜತೆಗೆ ಈಗಾಗಲೇ 3000ರಕ್ಕೂ ಹೆಚ್ಚು ಬಸ್‌ಗಳನ್ನು ಖರೀದಿಸಿದ್ದೇವೆ ಎಂದು ಹೇಳುವ ನೀವು ಸಾರಿಗೆ ನೌಕರರ ವೇತನ ವಿಷಯ ಬಂದಾಗ ಏಕೆ ಆರ್ಥಿಕ ದಿವಾಳಿ ಆಗಿದ್ದೇವೆ ಎಂಬ  ರೀತಿ ಮಾತನಾಡುತ್ತೀರಿ ಮಂತ್ರಿಗಳೆ. ನಿಮಗೆ ಇದು ಶೋಭೆ ತರುತ್ತದೆ ಯೋಚಿಸಿ?

ಇನ್ನಾದರೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವತ್ತ ನಡೆಯಿರಿ ಇಲ್ಲ ಮತ್ತೊಮ್ಮೆ 2021ರ ಏಪ್ರಿಲ್‌ 7ರ ಮುಷ್ಕರ ಮಾಡುವ ಕಾಲ ಸದ್ಯದಲ್ಲೇ ಬರುತ್ತದೆ, ಕಾರಣ ಈಗ ನಾವು ಬಸ್‌ ನಿಲ್ಲಿಸಿ ಮುಷ್ಕರ ಮಾಡುವುದಕ್ಕೆ ಬೆಂಬಲ ಕೊಡುವುದಿಲ್ಲ ಎಂದು ಹೇಳುತ್ತಿರುವ ಅಧಿಕಾರಿಗಳು ಕೂಡ ನಿಮ್ಮ ವಿರುದ್ಧ ತಿರುಗಿ ಬೀಳುವುದಕ್ಕೂ ಸಜ್ಜಾಗುತ್ತಿದ್ದಾರೆ ಇದನ್ನು ನೆನಪಿನಲ್ಲಿಡಿ ಎಂದು ಈ ಮೂಲಕ ಎಚ್ಚರಿಕೆ ಕೊಡುತ್ತಿದ್ದಾರೆ ಬಹುತೇಕ ಸಮಸ್ತ ಸಾರಿಗೆ ಸಂಘಟನೆಗಳ ಮುಖಂಡರು ಹಾಗೂ ಅಧಿಕಾರಿಗಳು/ನೌಕರರು.

Deva
the authorDeva

Leave a Reply

error: Content is protected !!