ಬೆಂಗಳೂರು: ಕಾವೇರಿ, ಕಬಿನಿ, ಕಾಳಿ ಸೇರಿ ರಾಜ್ಯದ 17 ನದಿಗಳ ನೀರು ನೇರವಾಗಿ ಕುಡಿಯೋಕೆ ಯೋಗ್ಯವಲ್ಲ ಎಂಬ ವರದಿಯೊಂದನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದೆ. ಈ ಮೂಲಕ ನೇರವಾಗಿ ಈ ನದಿಗಳ ನೀರು ಕುಡಿಯುವುದರಿಂದ ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ ಎಂಬುವುದು ಸತ್ಯವಾಗಿದೆ.
ಹೌದು! ಆಧುನಿಕತೆ ಬೆಳೆದಂತೆ ಪರಿಸರದಲ್ಲಿ ಮಾಲಿನ್ಯ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಕುಡಿಯುವ ನೀರು ಹಾಗೂ ಗಾಳಿಯಲ್ಲಿ ಕಲುಷಿತ ಪ್ರಮಾಣ ಹೆಚ್ಚುತ್ತಲೇ ಇದೆ ಎಂಬುದಕ್ಕೆ ನಿದರ್ಶನ ಎನ್ನುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಈ ವರದಿ ಬಿಡುಗಡೆ ಮಾಡಿದೆ.
ಮಂಡಳಿ ಬಿಡುಗಡೆ ಮಾಡಿರುವ ವರದಿಯಲ್ಲಿ ರಾಜ್ಯದ ಪ್ರಮುಖ 17 ನದಿಗಳು ಕಲುಷಿತ ಆಗಿರೋದು ಬಯಲಾಗಿದೆ. ಈ ವರ್ಷ ಮಾಲಿನ್ಯ ನಿಯಂತ್ರಣ ಮಂಡಳಿ ನದಿಗಳ ಹರಿವಿನಲ್ಲಿ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದೆ. ಅದರಲ್ಲಿ 15 ನದಿಗಳ ನೀರು ನೇರವಾಗಿ ಕುಡಿಯೋಕೆ ಯೋಗ್ಯವಲ್ಲ ಎಂದು ವರದಿಯಾಗಿದೆ.
ನೇರವಾಗಿ ಕುಡಿಯೋಕೆ ಯೋಗ್ಯವಲ್ಲದ ನದಿಗಳ ನೀರು?: ಅರ್ಕಾವತಿ ನದಿ, ಲಕ್ಷ್ಮಣ ತೀರ್ಥ ನದಿ, ಮಲಪ್ರಭಾ ನದಿ, ತುಂಗಭದ್ರಾ ನದಿ, ಭದ್ರಾ ನದಿ, ಕಾವೇರಿ ನದಿ, ಕಬಿನಿ ನದಿ, ಕಾಳಿ ನದಿ, ಕೃಷ್ಣ ನದಿ, ಅಸಂಗಿ ಕೃಷ್ಣ ನದಿ, ಶಿಂಷಾ ನದಿ, ಭೀಮಾ ನದಿ, ನೇತ್ರಾವತಿ ನದಿ, ಕುಮಾರಧಾರ ನದಿ, ತುಂಗಾ ನದಿ, ಯಗಚಿ ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ಮಹಾನಗರಗಳು ಹಾಗೂ ನಗರಗಳಲ್ಲಿನ ಕಂಪನಿಗಳು, ಕಾರ್ಖಾನೆಗಳು ಹೊರಸೂಸುವ ಕೆಮಿಕಲ್ ಹಾಗೂ ತ್ಯಾಜ್ಯದಿಂದಳೇ ನೀರು ಕಲುಷಿತ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಮಾಲಿನ್ಯ ಉಂಟಾಗುವ ಜಾಗದಲ್ಲಿ ಪ್ಲಾಂಟ್‌ಗಳನ್ನು ರಚನೆ ಮಾಡಿ ನಿಯಂತ್ರಣ ಮಾಡದೇ ಇರೋದು ಮಾಲಿನ್ಯಕ್ಕೆ ಕಾರಣವಾಗಿದೆ.
ಸರ್ಕಾರ ಕೂಡಲೇ ಎಚ್ಚೆತ್ತು ನಿಯಂತ್ರಣ ಮಾಡಬೇಕು. ಮಾನಿಟರ್‌ಗೆ ಹೆಚ್ಚು ಸಿಬ್ಬಂದಿ ನೇಮಕ ಮಾಡಿ ಮಾನಿಟರ್ ಮೂಲಕ ಮಾಲಿನ್ಯ ತಡೆಗಟ್ಟಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ. ಒಟ್ಟಾರೆ 17 ನದಿಗಳು ಕಲುಷಿತ ಆಗಿರೋದು ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷೆಯಲ್ಲಿ ಬಯಲಾಗಿದೆ. ಹೀಗಾಗಿ ಈ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಏನು ಕ್ರಮ ತೆಗೆದುಕೊಳ್ಳಲಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಏನು ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.