ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಹಾಸನ: ಎರಡೂವರೆ ವರ್ಷದ ಬಳಿಕ ಸಚಿವ ಸ್ಥಾನ ನೀಡುತ್ತೇನೆ ಎಂದು ನನ್ನನ್ನು ಜೆಡಿಎಸ್‌ನಿಂದ ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ಕಾಂಗ್ರೆಸ್‌ಗೆ ಕರೆತರುವಾಗ ನೀಡಿದ್ದ ಭರವಸೆಯಲ್ಲಿ ಮುಚ್ಚುಮರೆ ಏನಿಲ್ಲ. ಸಚಿವರನ್ನಾಗಿ ಮಾಡುವುದಾಗಿ ಸಿದ್ದರಾಮಯ್ಯನವರು ಭರವಸೆ ಕೊಟ್ಟಿದ್ದರು. ಎರಡೂವರೆ ವರ್ಷದ ಬಳಿಕ ಸಚಿವನನ್ನಾಗಿ ಮಾಡುವುದಾಗಿ ಸಾರ್ವಜನಿಕ ವೇದಿಕೆಗಳಲ್ಲೂ ತಿಳಿಸಿದ್ದಾರೆ ಎಂದರು.
ಜಿಲ್ಲೆಗೆ ಪಕ್ಷದ ಹಿತದೃಷ್ಟಿಯಿಂದ ಸಚಿವ ಸ್ಥಾನ ನೀಡಬೇಕು ಎಂಬ ರಾಜಕೀಯ ಲೆಕ್ಕಾಚಾರಗಳು ಇವೆ. ಗೆದ್ದಿರುವುದು ನಾನೊಬ್ಬನೇ. ಹೀಗಾಗಿ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ. ಸದ್ಯಕ್ಕೆ ಸಮಯ ಕೂಡಿಬಂದಿಲ್ಲ. ಸಂಪುಟ ಪುನರ್ರರಚನೆಯಾಗಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯನವರ ವಿರುದ್ಧ ಯಾರು, ಎಷ್ಟೇ ಬಾಯಿ ಬಡಿದುಕೊಂಡರೂ ಏನೂ ಮಾಡಲಾಗುವುದಿಲ್ಲ. 5 ವರ್ಷ ಸಿದ್ದರಾಮಯ್ಯ ಸುಭದ್ರ ಸರ್ಕಾರ ನಡೆಸುತ್ತಾರೆ. ಹಣಕಾಸಿನ ಕೊರತೆ ಇದೆ ಎಂಬುದಲ್ಲೇ ಸುಳ್ಳು ಎಂದರು.
ಇನ್ನು ಅರಸೀಕೆರೆ ಕ್ಷೇತ್ರವೊಂದಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡಲಾಗಿದೆ. ಯಾವ ಅಭಿವೃದ್ಧಿ ಕೆಲಸಗಳೂ ನಿಂತಿಲ್ಲ. 56 ಸಾವಿರ ಕೋಟಿ ರೂ.ಗಳ ಗ್ಯಾರಂಟಿ ಯೋಜನೆಗಳನ್ನೂ ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಪ್ರತಿ ಮನೆಗೆ ತಿಂಗಳಿಗೆ 5 ಸಾವಿರ ರೂ.ಗಳು ಮನೆ ಬಾಗಿಲಿಗೆ ತಲುಪುತ್ತಿವೆ ಎಂದು ತಿಳಿಸಿದರು.
Related
