- 300 ರೂ.ಗಳಿಂದ 3000 ರೂ.ಗಳವರೆಗೂ ಫೋನ್ ಪೇ ಮಾಡಿಸಿಕೊಂಡ ಅಧಿಕಾರಿ ನಟರಾಜ
- ಕಂಡು ಕಾಣದಂತೆ ವರ್ತಿಸುತ್ತಿರುವ ಡಿಪೋ ಮ್ಯಾನೇಜರ್ ನಡೆ ಅನುಮಾನಕ್ಕೆ ಆಸ್ಪದ
- 2021ರಿಂದಲೂ ಫೋನ್ ಪೇ ಮಾಡಿಸಿಕೊಳ್ಳುತ್ತಿರುವ ನಟರಾಜನಿಗೆ ಸಾಥ್ ನೀಡಿದ್ದಾರೆಯೇ ಡಿಎಂ?
ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ಹೊಸದುರ್ಗ ಡಿಪೋನಲ್ಲಿ ಚಾಲನಾ ಸಿಬ್ಬಂದಿಗಳಾದ ಚಾಲಕ ಮತ್ತು ಕಂಡಕ್ಟರ್‌ಗಳು ಲಂಚ ಕೊಡದಿದ್ದರೆ ಡ್ಯೂಟಿ ಕೊಡುವುದಿಲ್ಲ ಎಂಬ ನಿಯಮವನ್ನು ಕೆಲ ಅಧಿಕಾರಿಗಳು ಮಾಡಿಕೊಂಡು ಮಂತ್ಲಿ ವಸೂಲಿಯಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದಕ್ಕೆ ತಾಜಾ ನಿದರ್ಶನ ಎಂಬಂತೆ ಹೊಸದುರ್ಗ ಘಟಕದ ಸಂಚಾರ ಅಧಿಕಾರಿ ( ಟಿಐ ) ಟಿ.ನಟರಾಜು ಎಂಬುವರು ಚಾಲಕರು, ನಿರ್ವಾಹಕರು ಮತ್ತು ಚಾ ಕಂ ನಿ ಸಿಬ್ಬಂದಿಗಳು ತುರ್ತು ಸಮಯದಲ್ಲಿ ಗೈರಾದರೆ, ಸಣ್ಣಪುಟ್ಟ ತಪ್ಪುಗಳನ್ನು ಮಾಡಿದರೆ ಅದನ್ನು ಮೌಖಿಕವಾಗಿ ಎಚ್ಚರಿಕೆ ನೀಡಿ ಕ್ಷಮಿಸುವ ಬದಲಿಗೆ ಅಂತಹ ಸಣ್ಣ ತಪ್ಪುಗಳಿಗೂ ಅಮಾನತು ಶಿಕ್ಷೆ ಕೊಡಿಸುವುದಾಗಿ ಬೆದರಿಸಿ ಡ್ಯೂಟಿ ಕೊಡದೆ ಸತಾಯಿಸಿ, ಆ ಬಳಿಕ ಲಂಚ ಪಡೆದು ಡ್ಯೂಟಿ ಕೊಡುತ್ತಾರೆ ಎಂಬ ಆರೋಪವಿದೆ.
ಇನ್ನು ತಿಂಗಳು ತಿಂಗಳು ಮಂತ್ಲಿ ಕೊಟ್ಟವರಿಗೆ ಮಾತ್ರ ಸರಿಯಾಗಿ ಡ್ಯೂಟಿ ಕೊಡುತ್ತಾರೆ ಇಲ್ಲ ಎಂದರೆ ಬೆಳಗ್ಗೆಯಿಂದ ಸಂಜೆ ವರೆಗೂ ಡಿಪೋದಲ್ಲೇ ನೌಕರರನ್ನು ಕಾಯಿಸಿ ಬಳಿದ ರಜೆ ಚೀಟಿಕೊಟ್ಟುಹೋಗಿ ಎಂದು ರಜೆ ಹಾಕಿಸುತ್ತಾರೆ. ಮತ್ತೆ ಅದನ್ನು ಕೇಳಲು ಹೋದರೆ ಗೈರುಹಾಜರಿ ತೋರಿಸುತ್ತಾರೆ ಎಂಬ ಆರೋಪವನ್ನು ಘಟಕದ ನೌಕರರು ಮಾಡಿದ್ದಾರೆ.
ಈ ಸಾರಿಗೆ ಅಧಿಕಾರಿ ನಟರಾಜ್ ಅವರು, ನೌಕರರಿಂದ 300 ರೂ.ಗಳಿಂದ 3000 ರೂ.ಗಳವರೆಗೂ ಫೋನ್ ಪೇ ಮಾಡಿಸಿಕೊಂಡಿರುವುದು ಬಹಿರಂಗವಾಗಿದೆ. ಆದರೂ ಮೇಲಧಿಕಾರಿಗಳು ಈತನ ವಿರುದ್ಧ ಈವರೆಗೂ ಸೂಕ್ತ ಕ್ರಮ ಜರುಗಿಸಿಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಡ್ಯೂಟಿ ಕೊಡದ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಹೇಳಿದರೆ, ನನಗೆ ಬೆದರಿಕೆ ಹಾಕಲು ಬರಬೇಡಿ, ಮೇಲಧಿಕಾರಿಗಳಿಗೂ ನಾವು ಮಂತ್ಲಿ ಕೊಡಬೇಕು. ಹೀಗಿರುವಾಗ ಅವರು ನಮ್ಮನ್ನು ಏನು ಮಾಡಲು ಸಾಧ್ಯ, ಒಂದು ವೇಳೆ ನೀವು ದೂರು ನೀಡಲು ಹೋದರೆ, ವಾರ ಅಥವಾ 15 ದಿನಗಳಲ್ಲಿ ನೀವೆ ವರ್ಗಾವಣೆ ಆಗುತ್ತೀರಿ ಇಲ್ಲ ಅಮಾನತಾಗಿ ಮನೆಗೆ ಹೋಗುತ್ತೀರಿ ಎಂದು ಬೆದರಿಸುತ್ತಿದ್ದಾರೆ ಎಂಬ ಆರೋಪವನ್ನು ನೌಕರರು ಮಾಡಿದ್ದಾರೆ.
ಫೋನ್ ಪೇ ಮೂಲಕ ನಟರಾಜುಗೆ ಲಂಚ ಕೊಡಿರುವ ಬಗ್ಗೆ ಕೆಲ ನೌಕರರು ಭಯಗೊಂಡಿದ್ದು, ನಾವು ಲಂಚ ಕೊಟ್ಟಿರುವುದರಿಂದ ನಮಗೆ ತೊಂದರೆ ಆಗಬಹುದು ಎಂದು ಹೆದರಿ ನಾವು ನಟರಾಜ ಸಹೇಬರಿಗೆ ಲಂಚ ಕೊಟ್ಟಿಲ್ಲ ನಮ್ಮ ಎಟಿಎಂ ಕಾರ್ಡ್‌ಅನ್ನು ಊರಿನಲ್ಲಿರುವ ನಮ್ಮ ಕುಟುಂಬದವರ ಕೈಗಿತ್ತು ಬಂದಿದ್ದೇವೆ. ಹಾಗಾಗಿ ನಮಗೆ ಊಟಕ್ಕೆ ಹಣ ಬೇಕಾದಾಗ ನಟರಾಜ ಸರ್‌ಗೆ ಫೋನ್ ಪೇ ಮಾಡಿ ಅವರಿಂದ ನಗದು ಪಡೆದುಕೊಂಡಿದ್ದೇವೆ ಅಷ್ಟೇ ಎಂದು ಹೇಳುತ್ತಿದ್ದಾರೆ.
ಇದನ್ನು ಗಮನಿಸಿದರೆ, ಇಲ್ಲಿ ಲಂಚಕೋರ ಅಧಿಕಾರಿಗಳು ನೌಕರರನ್ನು ಎಷ್ಟು ಭಯದಲ್ಲಿ ಇಟ್ಟಿದ್ದಾರೆ ಎಂಬುವುದು ಗೊತ್ತಾಗುತ್ತದೆ. ಇನ್ನು ಟಿಐ ನಟರಾಜ ಲಂಚ ಪಡೆದಿರುವುದು ಅದೂ ಕೂಡ ಫೋನ್ ಪೇ ಮಾಡಿಸಿಕೊಂಡಿದ್ದಾರೆ. ಇದೆಲ್ಲವು ಸುಮಾರು ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದಲೂ ನಡೆಯುತ್ತಿದ್ದರೂ ಡಿಪೋ ಮ್ಯಾನೇಜರ್ ಗಮನಕ್ಕೆ ಇದು ಬಂದಿಲ್ಲವೇ?
ಒಂದು ವೇಳೆ ಬಂದಿದ್ದರೂ ಅವರು ಏಕೆ ಸುಮ್ಮನಿದ್ದಾರೆ. ಅವರು ಕೂಡ ಇದರಲ್ಲಿ ಭಾಗೀದಾರರೆಯೇ ಎಂಬ ಅನುಮಾನ ದಟ್ಟವಾಗಿ ಮೂಡುತ್ತಿದೆ. ಕಾರಣ ಟಿಐ ಡಿಫೋದಲ್ಲಿ ಡಿಎಂಗಿಂತ ಕೆಳ ಹಂತದ ಸಿಬ್ಬಂದಿ ಈತ ನೌಕರರಿಂದ ಲಂಚ ಪಡೆಯುತ್ತಿದ್ದಾನೆ ಎಂದರೆ ಕೂಡಲೇ ಈತನ ವಿರುದ್ಧ ಕ್ರಮ ಜರುಗಿಸಿ ಅಮಾನತು ಮಾಡಿಸುವ ಅಧಿಕಾರ ಡಿಎಂಗೆ ಇದೆ. ಆದರೂ ಮಾಡಿಸಿಲ್ಲ ಎಂದರೆ ಏನರ್ಥ?
ಒಟ್ಟಾರೆ ರಾಜ್ಯದ ಸರ್ಕಾರಿ ಸ್ವಾಮ್ಯದಲ್ಲಿರುವ ನಿಗಮಗಳಲ್ಲಿ ಸಾರಿಗೆ ನಿಗಮ ಅತ್ಯಂತ ಕೀಳುಮಟ್ಟದ ಅಧಿಕಾರಿಗಳನ್ನು ಅದರಲ್ಲೂ ನೌಕರರಿಂದ ಲಂಚ ಕೀಳುವ ಬಹುತೇಕ ಅಧಿಕಾರಿಗಳನ್ನು ಹೊಂದಿರುವ ನಿಗಮ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಇದಕ್ಕೆ ನೌಕರರ ಪರ ಸಂಘಟನೆಗಳ ಮುಖಂಡರ ನಡೆಯೂ ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ.
ಇನ್ನಾದರೂ ಇಂಥ ಲಂಚಕೋರ ಅಧಿಕಾರಿಗಳ ವಿರುದ್ಧ ನೌಕರರಿಂದಲೇ ಬದುಕು ಕಟ್ಟಿಕೊಂಡಿರುವ ಸಂಘಟನೆಗಳ ಮುಖಂಡರು ಸಿಡಿದೆದ್ದು ನೌಕರರಿಗೆ ನ್ಯಾಯ ದೊರಕಿಸಿಕೊಡುವತ್ತ ಹೆಜ್ಜೆಹಾಕಬೇಕು ಎಂಬುವುದು ನೌಕರರ ಆಕ್ರೋಶದ ನುಡಿಯಾಗಿದೆ.