ತಿ.ನರಸೀಪುರ: ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ನಿನ್ನೆ (ಜು.9) ಹನುಮಜಯಂತಿಯ ವೇಳೆ ನಡೆದ ಗಲಾಟೆಯಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ನಡೆದಿದ್ದು, ಈ ಹಿನ್ನೆಲೆಯಲ್ಲಿ 6 ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ತಿ.ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿಯ ನಿವಾಸಿ ವೇಣುಗೋಪಾಲ್ ನಾಯಕ್ (32) ಕೊಲೆಯಾದ ಯುವಕ.
ಪಟ್ಟಣದ ನಿವಾಸಿಗಳಾದ ಮಣಿಕಂಠ, ಸಂದೇಶ್, ಶಂಕರೇಗೌಡ, ಅನಿಲ್, ಮಂಜು, ಹ್ಯಾರಿಸ್ ಸೇರಿದಂತೆ ಇತರರು ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ.
ಹನುಮ ಜಯಂತಿ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಒಂದು ಗುಂಪ್ಪಿನ ಯುವಕರು ಬಾಟಲಿಯಿಂದ ಇರಿದು ವೇಣುಗೋಪಾಲ್ನ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ತಿ.ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿಯ ನಿವಾಸಿಯಾಗಿದ್ದ ವೇಣುಗೋಪಾಲ್ ಯುವಬ್ರಿಗೇಡ್ನ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾಗಿದ್ದಾನೆ.
ಈ ಸಂಬಂಧ ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇನ್ನು ಮರಣೋತ್ತರ ಪರೀಕ್ಷೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಮೃತ ದೇಹ ರವಾನಿಸಲಾಗಿದೆ.