ತಿ.ನರಸೀಪುರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ಮೂವರು ರೈತರು ದಾರುಣವಾಗಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ನಿಲಸೋಗೆ ಗ್ರಾಮದ ನಿವಾಸಿಗಳಾದ ರಾಚೇಗೌಡ (60), ಮಹದೇವಸ್ವಾಮಿ (38) ಹಾಗೂ ಹರೀಶ್ (32) ಮೃತ ರೈತರು.
ರಾಚೇಗೌಡ ಇಂದು ಮುಂಜಾನೆ ಭತ್ತದ ಗದ್ದೆಗೆ ಗೊಬ್ಬರ ಹಾಕಲು ಹೋದಾಗ ತಮ್ಮ ಜಮೀನಿನಲ್ಲಿ ಬಿದ್ದಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಗಮನಿಸದೆ ತುಳಿದಿದ್ದಾರೆ. ವಿದ್ಯುತ್ ಆಘಾತಕ್ಕೆ ಒಳಗಾಗಿ ಒದ್ದಾಡುತ್ತಿದ್ದ ಅವರನ್ನು ರಕ್ಷಿಸಲು ಮಹದೇವಸ್ವಾಮಿ ಮುಂದಾಗಿದ್ದಾರೆ.
ಈ ವೇಳೆ ಮಹದೇವಸ್ವಾಮಿ ಅವರಿಗೂ ಕೂಡಾ ವಿದ್ಯುತ್ ಪ್ರವಹಿಸಿದೆ. ಈ ಇಬ್ಬರು ಒತ್ತಾಡುತ್ತಿರುವುದನ್ನು ಗಮನಿಸಿದ ಹರೀಶ್ ಅವರ ಪ್ರಾಣ ಉಳಿಸಲು ಮುಂದಾಗಿದ್ದಾರೆ. ಈ ವೇಳೆ ಹರೀಶ್ ಕೂಡಾ ಆಘಾತಕ್ಕೊಳಗಾಗಿದ್ದಾರೆ. ಈ ರೀತಿ ಮೂವರು ಸ್ಥಳದಲ್ಲೇ ವಿದ್ಯುತ್ಗೆ ಬಲಿಯಾಗಿದ್ದಾರೆ.
ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಮೂವರು ಮೃತಪಟ್ಟು ಗಂಟೆ ಕಳೆದರೂ, ಅಧಿಕಾರಿಗಳು ಸ್ಥಳಕ್ಕಾಗಮಿಸಿಲ್ಲ. ಮೃತರ ಕುಟುಂಬಕ್ಕೆ ನ್ಯಾಯ
ಕೊಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಘಟನೆ ಸಂಬಂಧ ತಿ.ನಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.