ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ ತಿ.ನರಸೀಪುರದಲ್ಲಿ ನಡೆದ ಬಂದ್ ಯಶಸ್ವಿಯಾಯಿತು.
ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅಲ್ಲಿಂದ ಪ್ರತಿಭಟನೆ ಮೆರವಣಿಗೆ ಪ್ರಾರಂಭಿಸಿದರು. ಮೇರವಣಿಗೆ ವೇಳೆ ರಾಜ್ಯಪಾಲರು ಹಾಗೂ ಕೇಂದ್ರ ಬಿಜೆಪಿ ಸರ್ಕಾರ, ಜೆಡಿಎಸ್ ಪಕ್ಷದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಪ್ರತಿಭಟನಾ ಮೇರವಣಿಗೆ ಖಾಸಗಿ ಬಸ್ ನಿಲ್ದಾಣಕ್ಕೆ ತಲುಪಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ ರಾಜ್ಯಪಾಲರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ಲಿಂಕ್ ರಸ್ತೆ ಮೂಲಕ ತೆರಳಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟಸಿ ತದ ನಂತರ ತಾಲೂಕು ಆಡಳಿತ ಸೌಧಕ್ಕೆ ಬಂದು ತಹಸೀಲ್ದಾರ್ ಸುರೇಶಾಚಾರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಕೆ.ಮಹದೇವ್, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ಚುನಾಯಿತ ಸರ್ಕಾರವನ್ನು ಅಭದ್ರಗೊಳಿಸುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪುರಸಭಾ ಸದಸ್ಯ ತುಂಬಲ ಪ್ರಕಾಶ್ ಮಾತನಾಡಿ, ರಾಜಭವನ ಪ್ರಸ್ತುತ ಬಿಜೆಪಿ ಭವನವಾಗಿದೆ ಕೇಂದ್ರದ ಬಿಜೆಪಿ ಸರ್ಕಾರದ ಅಣತಿಯಂತೆ ರಾಜ್ಯಪಾಲರು ಕಾರ್ಯ ನಿರ್ವಹಿಸುತ್ತಿದ್ದಾರೆ, ಒಬ್ಬ ಪ್ರಾಮಾಣಿಕ ಅಹಿಂದ ನಾಯಕನ ರಾಜಕೀಯವನ್ನು ಕೊನೆಗಾಣಿಸಲು ಇನ್ನಿಲ್ಲದ ಹುನ್ನಾರ ನಡೆಸುತ್ತಿದ್ದಾರೆ ಇದಕ್ಕೆ ನಾವು ಅವಕಾಶ ಕೂಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಹಿಂದುಳಿದ ವರ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ ರಮೇಶ್ ಮಾತನಾಡಿ, ಮುಡಾ ನಿವೇಶನ ಅಕ್ರಮ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯ ಪಾಲರು ,ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ, ಶಶಿಕಲಾಜೊಲ್ಲೆ ಇವರಿಗೇಕೆ ವರ್ಷ ಕಳಿಯುತಿದ್ದರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ಅಲಗೂಡು ಶಿವಕುಮಾರ್, ಆಲಗೂಡು ನಾಗರಾಜು ಸೇರಿದಂತೆ ಹಲವು ಮುಖಂಡರು ಮಾತನಾಡಿದರು. ಪ್ರತಿಭಟನಾಕಾರರು ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿಗೆ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರ ಕಚೇರಿ ಕೊಠಡಿಗಳ ಬಾಗಿಲು ಮುಚ್ಚಿಸಿ ಸುಮಾರು 20 ನಿಮಿಷಗಳ ಕಾಲ ಹೊರ ನಿಲ್ಲಿಸಿದರು.
ಈ ಬಗ್ಗೆ ಸುದ್ದಿಗಾರರು ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಸಿ. ಕೃಷ್ಣ ಅವರನ್ನು ಪ್ರಶ್ನೆ ಮಾಡಿದಾಗ ಸ್ಪಷ್ಟಿಕರಣ ನೀಡಿದ ಇಒ ಕೃಷ್ಣ ಪ್ರತಿಭಟನಾಕಾರರು ಕಚೇರಿಗೆ ಬಂದು ಕಚೇರಿ ಮುಚ್ಚಿ ನೈತಿಕ ಬೆಂಬಲ ನೀಡುವಂತೆ ಕೇಳುತಿದ್ದರಿಂದ ಮಹಿಳೆ ನೌಕರರು ಸೇರಿದಂತೆ ಎಲ್ಲ ನೌಕರರ ಸುರಕ್ಷಿತ ದೃಷ್ಟಿಯಿಂದ ಸ್ವಲ್ಪ ಸಮಯ ಹೊರ ನಿಂತು ಪ್ರತಿಭಟನೆ ಮುಗಿದ ನಂತರ ಎಂದಿನಂತೆ ಕರ್ತವ್ಯ ಮುಂದುವರೆಸಲಾಯಿತು ಎಂದು ಹೇಳಿದರು. ಹೊರ ನಿಂತ್ತಿರುವ ಮಹಿಳಾ ನೌಕರರಿಗೆ ತೊಂದರೆಯಾದರೆ ಯಾರು ಹೊಣೆ ಎಂದಾಗ ನಾನೇ ಹೊಣೆಯಾಗುತ್ತೇನೆ ಎಂದು ಸಹ ಉತ್ತರ ನೀಡಿದರು.
ಈ ಸಂದರ್ಭದಲ್ಲಿ ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೆಗೌಡ, , ತಾ. ಪಂ.ಮಾಜಿ ಅಧ್ಯಕ್ಷರುಗಳಾದ ಹ್ಯಾಕನೂರು ಉಮೇಶ್, ಮಲ್ಲಿಕಾರ್ಜುನ ಸ್ವಾಮಿ, ತಾ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಮಲಿಂಗಯ್ಯ , ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ,ಪುರಸಭಾ ಸದಸ್ಯರುಗಳಾದ ಟಿ.ಎಂ. ನಂಜುಂಡಸ್ವಾಮಿ.
ಸೋಮಣ್ಣ, ಮಂಜು ಬಾದಾಮಿ, ತುಂಬಲ ಪ್ರಕಾಶ್, ಎಸ್. ಮದನ್ ರಾಜು, ಅಹಮದ್ ಸೈಯದ್, ಪಿ. ಎಲ್. ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಾಡ್ರಹಳ್ಳಿ ಶಿವಮೂರ್ತಿ,ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕರು ಗಳಾದ ಅಮ್ಜದ್ ಖಾನ್, ಕುರುಬರ ಸಂಘದ ಅಧ್ಯಕ್ಷ ಮನ್ನಹುಂಡಿ ಮಹೇಶ್, ಕೊತ್ತೇಗಾಲ ಬಸವರಾಜು, ಆಲಗೂಡು ನಾಗರಾಜು.
ಪಿ. ಸ್ವಾಮಿನಾಥ ಗ್ರಾಂ.ಪಂ. ಅಧ್ಯಕ್ಷ ಚಂದ್ರಮ್ಮ,ಮಾಜಿ ಅಧ್ಯಕ್ಷ ಕುಪ್ಯ ಭಾಗ್ಯಮ್ಮ, ಟೌನ್ ಕಾಂಗ್ರೆಸ್ ಅಧ್ಯಕ್ಷ ಅಂದಾನಿ ಗೌಡ, ಕನ್ನಹಳ್ಳಿ ಲಕ್ಷ್ಮಣ, ಕಲಿಯೂರು ಶಿವಣ್ಣ, ವರುಣ ಯುವ ಕಾಂಗ್ರೆಸ್ ಅಧ್ಯಕ್ಷ ಅಮಾವಾಸೆ ಲಿಂಗರಾಜು, ಉಪಾಧ್ಯಕ್ಷ ನಟರಾಜು, ಮುಖಂಡರುಗಳಾದ ಅಬ್ದುಲ್ ಅತಿಕ್, ಸಬಿಲ್ ಮತ್ತಿತರರು ಇದ್ದರು.