
ಬೆಂಗಳೂರು: ಸಾರಿಗೆ ನೌಕರರ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಸಂಕ್ರಾಂತಿ ಬಳಿಕ ಸಾರಿಗೆ ಸಂಘಟನೆಗಳ ಸಭೆ ಕರೆಯುತ್ತೇವೆ ಎಂದು ಹೇಳಿ ಈವರೆಗೂ ಸಭೆ ಕರೆಯದಿರುವುದಕ್ಕೆ ಆಕ್ರೋಶಗೊಂಡಿರುವ ಜಂಟಿ ಕ್ರಿಯಾ ಸಮಿತಿ ಇದೇ ಏ.15ರಿಂದ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುವುದಕ್ಕೆ ಮುಂದಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಕಾರ್ಮಿಕರ ವೇತನ ಹೆಚ್ಚಳ ಸಂಬಂಧ ಕಳೆದ 2024ರ ಡಿ.31ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರ ಮಾಡದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡ ಅವರು ಮನವಿ ಮಾಡಿದ್ದರಿಂದ ಜಂಟಿ ಕ್ರಿಯಾ ಸಮಿತಿ ಅಂದು ಧರಣಿಯನ್ನು ಮುಂದೂಡಿತ್ತು.
ಆ ಬಳಿಕ ಅಂದರೆ ಸಂಕ್ರಾಂತಿ ಮುಗಿದ ಕೂಡಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಂಘಟನೆಗಳ ಸಭೆ ಕರೆದು 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಸಂಬಂಧ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೋಣ ಎಂದು ಸಚಿವರು ಮನವಿ ಮಾಡಿದ್ದರು.
ಹೀಗಾಗಿ ಜಂಟಿ ಕ್ರಿಯಾ ಸಮಿತಿ ಡಿ.31ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಡಿ.29ರಂದು ಹೇಳಿಕೆ ನೀಡಿತ್ತು. ಆ ಬಳಿಕ ಅಂದರೆ ಜನವರಿ 15ರ ಬಳಿಕ ಸಭೆ ಕರೆಯುತ್ತೇವೆ ಎಂದು ಹೇಳಿದ ಸರ್ಕಾರ ಅಥವಾ ಸಚಿವರು ಈವರೆಗೂ ಸಂಘಟನೆಗಳ ಸಭೆ ಕರೆದಿಲ್ಲ ಆದ್ದರಿಂದ ಮತ್ತೆ ಮುಷ್ಕರ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಇನ್ನು ಇದೇ ಏ.15ರಿಂದ ಮುಖ್ಯಮಂತ್ರಿ ಮನೆಮುಂದೆ ಧರಣಿ ಕೂರುವುದಾಗಿತಿಳಿಸಿದ್ದು, ನಾವು ಈವರೆಗೂ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ಕರೆಯುತ್ತಾರೆ ಎಂದು ಕಾದು ನೋಡಿದ್ದೇವೆ. ಅದರಂತೆ ಏ.5ರಂದು ಸಭೆಯನ್ನು ನಿಗದಿ ಮಾಡಿದ್ದರು ಆದರೆ, ಆ ಸಭೆಯನ್ನು ಮುಂದೂಡಿದ್ದು 7ದಿನಗಳು ಕಳೆದರೂ ಈವರೆಗೂ ಯಾವುದೆ ಮಾಹಿತಿ ಇಲ್ಲ.
ಹೀಗಾಗಿ ನಾವು ಇದೇ ಏ.15ರಿಂದ ಸಿಎಂ ಮನೆ ಮುಂದೆ ಧರಣಿ ಕೂರುತ್ತೇವೆ ಎಂದು ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಆದರಿಂದ ಏ.15ರಂದು ಸಾರಿಗೆ ಬಸ್ ವ್ಯತ್ಯಯವಾಗುವ ಸಂಭವ ಹೆಚ್ಚಿದೆ ಎಂದು ಹೇಳಲಾಗುತ್ತಿದ್ದು, ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡುವ ಸಾರ್ವಜನಿಕರು ಈ ಬಗ್ಗೆ ಸ್ವಲ್ಪ ಎಚ್ಚರ ವಹಿಸುವುದು ಸೂಕ್ತ.