ಬಳ್ಳಾರಿ: ಇಲ್ಲಿ ನಡೆದ ಬಿಜೆಪಿ ಎಸ್ಟಿ ಸಮಾವೇಶದ ನಂತರ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಮುಂದಾದ ಸಾರಿಗೆ ಸಚಿವ ಶ್ರೀರಾಮುಲು, ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ನವಶಕ್ತಿ ಸಮಾವೇಶದ ಬಳಿಕ ಸಚಿವ ಶ್ರೀರಾಮುಲು ಸಮಾವೇಶ ನಡೆದ ಮೈದಾನದಿಂದ ಹೊರತೆರಳುವ ವೇಳೆ ತಮಗೆದುರಾದ ಅಭಿಮಾನಿ ವರ್ಗಕ್ಕೆ ಅಭಿನಂದನೆ ಸಲ್ಲಿಸಲು ಮುಂದಾದರು. ಇದಕ್ಕಾಗಿ ತಮ್ಮ ಸರ್ಕಾರಿ ವಾಹನದ ಟಾಪ್ ಏರಿ ನಿಂತು ಜನಸಮೂಹದತ್ತ ಕೈ ಬೀಸಿದರು.
ಹೀಗೆ ಒಂದಷ್ಟು ದೂರ ಚಲಿಸುತ್ತಿದ್ದ ವಾಹನದ ಮೇಲೆ ನಿಂತಿದ್ದ ಶ್ರೀರಾಮುಲು ಜನರಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ರಾಮುಲು ಅವರ ಭದ್ರತಾ ಸಿಬ್ಬಂದಿ ಶ್ರೀರಾಮುಲು ಅವರ ಸುರಕ್ಷತೆಗಾಗಿ ಪಟ್ಟಪಾಡು ನೋಡುಗರ ಕಣ್ಣಿಗೆ ಕಟ್ಟಿದಂತೆ ಕಾಣುತ್ತಿತ್ತು. ಈ ರೀತಿ ಸಮುದಾಯಕ್ಕೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಸಚಿವ ಶ್ರೀರಾಮುಲು ಏಕಕಾಲದಲ್ಲೇ ಎರಡು ನಿಯಮ ಗಾಳಿಗೆ ತೂರಿದರು.
ನಿಯಮ 1: ಸರ್ಕಾರಿ ವಾಹನ ದುರ್ಬಳಕೆ
ಸಚಿವ ಶ್ರೀರಾಮುಲು ಬಿಜೆಪಿ ಪಕ್ಷದ ಕಾರ್ಯಕ್ರಮಕ್ಕೆ ಸರ್ಕಾರಿ ವಾಹನ ಬಳಸಿಕೊಂಡು ಕಾನೂನು ಉಲ್ಲಂಘನೆ ಮಾಡಿದರು. ಇಲಾಖೆ ನಿಯಮಗಳ ಪ್ರಕಾರ ಸರ್ಕಾರಿ ಕಾರ್ಯಕ್ರಮ ಹೊರತುಪಡಿಸಿದ ಇತರ ಕಾರ್ಯಕ್ರಮಗಳಿಗೆ ಸರ್ಕಾರಿ ವಾಹನ ಬಳಕೆ ನಿಷಿದ್ಧ.
ನಿಯಮ 2: ಚಲಿಸುವ ವಾಹನದ ಮೇಲ್ಭಾಗದಲ್ಲಿ ಪ್ರಯಾಣ
ಸರ್ಕಾರಿ ವಾಹನವನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಂಡಿದ್ದೂ ಅಲ್ಲದೆ, ಅದರ ಮೇಲೇರಿ ಪ್ರಯಾಣ ಮಾಡಿದ್ದು ಸಚಿವ ಶ್ರೀರಾಮುಲು ಮಾಡಿದ ಎರಡನೇ ಪ್ರಮಾದ.
ಸಾರಿಗೆ ನಿಯಮದ ಪ್ರಕಾರ, ಮೇಲ್ಮೈ ಮುಚ್ಚಿದ ವಾಹನ ನಿಧಾನಗತಿಯಲ್ಲಿ ಸಾಗುತ್ತಿರುವಾಗಲೂ ಅದರ ಮೇಲೆ ನಿಂತು, ಕೂತು ಪ್ರಯಾಣ ಮಾಡುವುದು ಶಿಕ್ಷಾರ್ಹ ಅಪರಾಧ. ಹೊಸ ಮಾದರಿಯ ಸನ್ ರೂಫ್ (ಓಪನ್ ರೂಫ್/ಟಾಫ್) ಒಳಗೊಂಡ ವಾಹನಗಳಿಗೆ ಈ ನಿಯಮದಲ್ಲಿ ಕೊಂಚ ರಿಯಾಯ್ತಿ ನೀಡಲಾಗಿದ್ದು, ಸೊಂಟ ಮಟ್ಟಕ್ಕೆ ನಿಂತು ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಪ್ರಚಾರ ಕಾರ್ಯಕ್ಕೆ ಎಂದಾದರೆ ಅಂತಹ ವಾಹನಗಳು ಸಾರಿಗೆ ಹಾಗೂ ಪೊಲೀಸ್ ಇಲಾಖೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ.
ಹೀಗೆ ಸಚಿವ ಶ್ರೀರಾಮುಲು ತಮ್ಮದೇ ಇಲಾಖೆಯ ನಿಯಮ ಮುರಿದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು, ಸಚಿವರ ಇಂದಿನ ಪ್ರಚಾರ ಪ್ರಕ್ರಿಯೆಯು, ಸಾರಿಗೆ ನಿಯಮದ ಸ್ಪಷ್ಟ ಉಲ್ಲಂಘನೆ ಮತ್ತು ಶಿಕ್ಷಾರ್ಹ ಅಪರಾಧ ಎಂದು ತಿಳಿಸಿದ್ದಾರೆ.
ಕೆಲದಿನಗಳ ಹಿಂದೆ ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಗುಂಟೂರಿನಲ್ಲಿ ಪಕ್ಷದ ಪ್ರಚಾರದ ವೇಳೆ ಕಾರಿನ ಮೇಲೆ ಕುಳಿತು ಪ್ರಚಾರ ನಡೆಸಿದ್ದರು. ಅವರ ಈ ಓಡಾಟವನ್ನು ಗಮನಿಸಿದ್ದ ಸಾರಿಗೆ ಇಲಾಖೆ ಐಪಿಸಿ ಸೆಕ್ಷನ್ 336, 279 ಹಾಗೂ ಮೋಟಾರು ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು.
ಈಗ ಇಅದೇ ಮಾದರಿಯಲ್ಲಿ ಸಚಿವ ಶ್ರೀರಾಮುಲು ಸರ್ಕಾರಿ ವಾಹನದ ಮೇಲೆ ನಿಂತು ಪ್ರಯಾಣ ಮಾಡಿ ನಿಯಮ ಮೀರಿ ನಿಂತಿದ್ದಾರೆ. ತಮ್ಮದೇ ಸಚಿವರ ಕಾನೂನು ಉಲ್ಲಂಘನೆ ವಿಚಾರದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಸಮಾವೇಶದ ನಂತರ ಅಭಿಮಾನಿಗಳು, ಕಾರ್ಯಕರ್ತರ ಒತ್ತಾಸೆಯಂತೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾದು ಬರುವ ವೇಳೆ ನನ್ನ ಸಹೋದರ, ಸಹೋದರಿಯರು, ಹಿರಿಯರು, ಸೇರಿದಂತೆ ಪ್ರತಿಯೊಬ್ಬರೂ ತೋರಿದ ಪ್ರೀತಿ, ಮಮತೆ, ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. pic.twitter.com/tXklosjcNk
— B Sriramulu (@sriramulubjp) November 20, 2022