ಬೀದರ್: ತಡರಾತ್ರಿ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಜಿಲ್ಲೆಯಾದ್ಯಂತ ಅವಾಂತರ ಸೃಷ್ಟಿಯಾಗಿದ್ದು, ಬೃಹತ್ ಗಾತ್ರದ ಮರಗಳು ನೆಲ ಕಚ್ಚಿವೆ, ವಿದ್ಯುತ್ ತಂತಿಗಳು ಧರೆಗುರುಳಿದ ಪರಿಣಾಮ ಹಲವೆಡೆ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಬೀದರ್ ನಗರ, ಔರಾದ್, ಕಮಲನಗರ ಸೇರಿ ಜಿಲ್ಲೆಯ ಹಲವೆಡೆ ಭಾರಿ ಮಳೆ ಸುರಿದಿದೆ. ಔರಾದ್ ಪಟ್ಟಣ ಸೇರಿ ಸಂತಪುರ, ಚಿಂತಾಕಿ, ವಡಗಾವ್ ಹೋಬಳಿ ಮತ್ತು ಮಲನಗರ ತಾಲೂಕಿನ ಮದನೂರ, ಖತಗಾಂವ, ಮೂರ್ಕಿ ಸೇರಿ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು ಅವಾಂತರ ಸೃಷ್ಟಿಯಾಗಿದೆ.
ಬಿರುಗಾಳಿ ಸಹಿತ ಸುರಿದ ಮಳೆಗೆ ಕಮಲನಗರದ ರೈಲ್ವೆ ನಿಲ್ದಾಣದಲ್ಲಿ ಬೃಹತ್ ಮರ ನೆಲಕ್ಕುರುಳಿದ್ದು ಮದನೂರ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಹರಿದು ಬಿದ್ದಿದ್ದರಿಂದ ಹಲವು ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ಕೆಲ ಮನೆಯ ಸೀಟುಗಳು ಹಾರಿ ದಿನಬಳಕೆ ವಸ್ತುಗಳೆಲ್ಲ ಹಾನಿಯಾಗಿವೆ. ಸದ್ಯ ಬೀದರ್‌ನಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ.
ಎಲ್ಲೆಲ್ಲಿ ಮಳೆ ಮುನ್ಸೂಚನೆ: ಏ.13 (ಇಂದು): ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲ್ಬುರ್ಗಿ, ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳ, ಬಳ್ಳಾರಿ, ದಾವಣಗೆರ , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗ, ತುಮಕೂರು, ಮಂಡ್ಯ.
ಏ.14ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೀದರ್ ಗದಗ, ಕಲ್ಬುರ್ಗಿ ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳ, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ.
ಏ.15ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರಗಿ, ವಿಜಯಪುರ, ಚಿತ್ರದುರ್ಗಾ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.