ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಕೂಡ ಭರ್ಜರಿ ಮಳೆಯಾಗಿದ್ದು, ರಾತ್ರಿಬಿದ್ದ ಮಳೆಗೆ ಸಿಲಿಕಾನ್ ಸಿಟಿ ಸಖತ್ ಕೂಲ್ ಕೂಲ್ ಆಗಿದ್ದು, ಜತೆಗೆ ಜೋರಾಗಿ ಬಂದ ಗಾಳಿ ಸಹಿತ ಮಳೆಗೆ ಹಲವು ಅನಾಹುತಗಳು ಸಂಭವಿಸಿವೆ.
ಬಿರುಗಾಳಿ ಮಳೆಯ ರೌದ್ರಾವತಾರಕ್ಕೆ ನಗರದ ಜನ ಹೈರಾಣಾಗಿದ್ದಾರೆ. ಇತ್ತ ಮೂರು ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಹೆಮ್ಮರವೊಂದು ಉರುಳಿ ಬಿದ್ದ ಪರಿಣಾಮ ಎರಡು ಕಾರುಗಳು ಒಂದು ಟಿಟಿ ವಾಹನ ಜಖಂಗೊಂಡಿದೆ. ರಾತ್ರಿ 11.30ರ ಸುಮಾರಿಗೆ ದೀಪಾಂಜಲಿ ನಗರದ ವ್ಯಾಪ್ತಿಯಲ್ಲಿ ಭಾರಿ ಅವಘಡ ಸಂಭವಿಸಿದೆ.
ರಾತ್ರಿ ಆಗಿರುವ ಅವಾಂತರ ಬೆಳ್ಳಂಬೆಳಗ್ಗೆ ಜನರ ಗಮನಕ್ಕೆ ಬಂದಿದೆ. ಮರ ಮತ್ತು ಕಂಬ ಬಿದ್ದಿದ್ದನ್ನು ನೋಡಿದ ಮಂದಿ ಕಂಗಾಲಾಗಿದ್ದಾರೆ. ಅಪಾಯಕಾರಿ ಮರಗಳ ತೆರವುಗೊಳಿಸುವ ಮೂಲಕ ಈ ಅವಾಂತರ ತಪ್ಪಿಸಿ ಎಂದು ಬಿಬಿಎಂಪಿಯನ್ನು ಒತ್ತಾಯಿಸಿದ್ದಾರೆ.
ಹಾಗೆಯೇ ನಾಗರಭಾವಿಯಲ್ಲಿ ದೊಡ್ಡ ಮರವೊಂದು ಬೇರು ಸಹಿತ ನೆಲಕ್ಕುರುಳಿದೆ. ನಾಗರಬಾವಿ ಸರ್ಕಲ್ ರಸ್ತೆ ಬದಿ ಇರುವ ಮರಬಿದ್ದಿದ್ದು ಅದೃಷ್ವವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ರಸ್ತೆ ಬದಿ, ಮನೆ, ಕಾಂಪ್ಲೆಕ್ಸ್ ಮುಂದೆ ಮರ ಬಿದ್ದಿದ್ದರ ಪರಿಣಾಮ ಕಾರು ಮಾತ್ರ ಸ್ವಲ್ಪಮಟ್ಟಿಗೆ ಜಖಂ ಆಗಿದೆ.
ಇನ್ನು ಆರ್ಆರ್ ನಗರದಲ್ಲಿ ಮಳೆಯಿಂದಾಗಿ ಪೆಟ್ರೋಲ್ ಬಂಕ್ ಜಲಾವೃತಗೊಂಡಿದೆ. ರಾತ್ರಿ ಸಂಪೂರ್ಣ ಜಲಾವೃತವಾಗಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ನೀರು ತೆಗೆಯುವ ಕೆಲಸದಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿ ನಿರತರಾಗಿದ್ದರು. ಮಳೆಯಿಂದ ಪೆಟ್ರೋಲ್ ಬಂಕ್ ಜಲಾವೃತವಾಗಿದ್ದ ಪರಿಣಾಮ ಪೆಟ್ರೋಲ್ ಸಿಗದೇ ವಾಹನ ಸವಾರರು ಬೇರೆಡೆಗೆ ಹೋಗುತ್ತಿದ್ದಾರೆ.
ಹೀಗೆ ನಗರದ ಹಲವು ಭಾಗಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಅನ್ನಪೂರ್ಣೇಶ್ವರಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನಿದ್ದೆಯಿಲ್ಲದೇ ಸ್ಥಳೀಯರು ರಾತ್ರಿಯೆಲ್ಲ ನೀರನ್ನು ಹೊರಹಾಕುವ ಕೆಲಸ ಮಾಡಿದರು. ಮನೆಯ ವಸ್ತುಗಳೆಲ್ಲ ಮಳೆಗೆ ತೊಯ್ದಿವೆ. ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದ ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
ಕೆಂಗೇರಿ – 89 ಮಿಮೀ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾ – 62 ಮಿಮೀ ನಾಯಂಡನಹಳ್ಳಿ – 61.5 ಮಿಮೀ. ಹೆಮ್ಮಿಗೆಪುರ – 61 ಮಿಮೀ. ಆರ್.ಆರ್. ನಗರ – 60 ಮಿಮೀ. ಮಾರುತಿ ಮಂದಿರ – 51.50 ಮಿಮೀ. ವಿದ್ಯಾಪೀಠ – 50 ಮಿಮೀ. ಉತ್ತರಹಳ್ಳಿ – 42 ಮಿಮೀ.
ಹಂಪಿನಗರ – 39 ಮಿಮೀ. ಯಲಹಂಕ – 38.50 ಮಿಮೀ. ಜಕ್ಕೂರು – 38 ಮಿಮೀ. ಕೊಟ್ಟಿಗೆಪಾಳ್ಯ – 33 ಮಿಮೀ. ಕೊಡಿಗೆಹಳ್ಳಿ – 28.50 ಮಿಮೀ. ನಂದಿನಿ ಲೇಔಟ್ – 28 ಮಿಮೀ ಮಳೆಯಾಗಿದ್ದು ಇನ್ನೂ 2ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.