ವಾಷಿಂಗ್ಟನ್: ಟ್ವಿಟ್ಟರ್ ಅನ್ನು ಆರೋಗ್ಯಕರ ಹಾದಿಯಲ್ಲಿ ಇರಿಸುವ ಪ್ರಯತ್ನವಾಗಿ ನಾವು ಜಾಗತಿಕವಾಗಿ ಉದ್ಯೋಗಿಗಳನ್ನು ಕಡಿತಗೊಳಿಸುವ ಪ್ರಕ್ರಿಯೆ ಕೈಗೊಳ್ಳುತ್ತಿದ್ದೇವೆ ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ತಿಳಿಸಿದ್ದಾರೆ.
ಮಸ್ಕ್ ಟ್ವಿಟ್ಟರ್ (Twitter) ಅನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೂ ಮೊದಲೇ ಇದರ ಅನಗತ್ಯ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುವ (Layoff) ಬಗ್ಗೆ ತಿಳಿಸಿದ್ದರು. ಅದರಂತೆ ಇದೀಗ ಮಸ್ಕ್ ಟ್ವಿಟ್ಟರ್‌ನ ಮಾಲೀಕನಾಗಿ ಒಂದು ವಾರ ಕಳೆದಿದ್ದು, ಉದ್ಯೋಗಿಗಳನ್ನು ವಜಾಗೊಳಿಸಲು ಈಗಿಂದಲೇ ಕ್ರಮ ಜರುಗಿಸುವ ಸುಳಿವು ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ಈ ಬಗ್ಗೆ ಕಂಪನಿ ತನ್ನ ಉದ್ಯೋಗಿಗಳಿಗೆ ಮೇಲ್ ಮಾಡಿದೆ. ಅದರಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ ಮಾಲೀಕರ ವೆಚ್ಚವನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ಈ ಸಾಮೂಹಿಕ ವಜಾದ ಮಾರ್ಗವನ್ನು ಅನುಸರಿಸಲಾಗುತ್ತಿದೆ ಎಂಬುದು ವರದಿಯಾಗಿದೆ.
ಇನ್ನು ಟ್ವಿಟ್ಟರ್‌ನ ಎಷ್ಟು ಉದ್ಯೋಗಿಗಳು ವಜಾಗೊಳ್ಳುತ್ತಾರೆ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೂ ಕಂಪನಿಯಲ್ಲಿ ಈಗಾಗಲೇ ಇರುವ ಅರ್ಧದಷ್ಟು ಉದ್ಯೋಗಿಗಳು ಕಡಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ವರದಿಗಳ ಪ್ರಕಾರ ಟ್ವಿಟ್ಟರ್‌ನ ಎಲ್ಲ ಕಚೇರಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಹಾಗೂ ಉದ್ಯೋಗಿ ಬ್ಯಾಡ್ಜ್ ಪ್ರವೇಶವನ್ನು ಅಮಾನತುಗೊಳಿಸುವ ಬಗ್ಗೆ ಮೇಲ್‌ನಲ್ಲಿ ತಿಳಿಸಲಾಗಿದೆ. ಇದು ಟ್ವಿಟ್ಟರ್‌ನ ಪ್ರತಿ ಉದ್ಯೋಗಿ, ಟ್ವಿಟ್ಟರ್‌ನ ವ್ಯವಸ್ಥೆ ಹಾಗೂ ಗ್ರಾಹಕರ ಡೇಟಾವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲಿದೆ ಎಂದು ತಿಳಿಸಲಾಗಿದೆ.