ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ನೂತನ ಸದಸ್ಯರಾಗಿ ಉಮಾಶ್ರೀ, ಎಂ.ಆರ್. ಸೀತಾರಾಮ್ ಮತ್ತು ಎಚ್.ಪಿ. ಸುಧಾಮ್ ದಾಸ್ ಅವರು ಪ್ರಮಾಣವಚನ ಸ್ವೀಕರಿಸಿದರು.
ಗುರುವಾರ ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್.ಕೆ. ಪಾಟೀಲ್, ಬೋಸರಾಜು ಸೇರಿದಂತೆ ಹಲವು ಶಾಸಕರು, ನೂತನ ಶಾಸಕರ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.
ಕಲಾವಿದರ ಕೋಟಾದಡಿ ಉಮಾಶ್ರೀ ಅವರಿಗೆ ಸ್ಥಾನ ನೀಡಿದರೆ, ಶಿಕ್ಷಣ ಕ್ಷೇತ್ರದ ಕೋಟಾದಡಿ ಎಂ.ಆರ್.ಸೀತಾರಾಮ್ ಹಾಗೂ ಸಮಾಜಸೇವೆ ಹೆಸರಲ್ಲಿ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್ ಅವರಿಗೆ ಸ್ಥಾನ ನೀಡಲಾಗಿದೆ.
ಮೇಲ್ಮನೆಯ ಮೂವರು ನಾಮನಿರ್ದೇಶಿತ ಸದಸ್ಯರಾದ ಮೋಹನ್ ಕುಮಾರ್ ಕೊಂಡಜ್ಜಿ, ಪಿ.ಆರ್. ರಮೇಶ್ ಮತ್ತು ಸಿ.ಎಂ. ಲಿಂಗಪ್ಪ ಅವರಿಂದ ತೆರವಾದ ಸ್ಥಾನಗಳಿಗೆ ಈ ಮೂವರು ನಾಮ ನಿರ್ದೇಶನಗೊಂಡಿದ್ದಾರೆ.
ಉಮಾಶ್ರೀ ಅವರು ಬಾಗಲಕೋಟೆ ಜಿಲ್ಲೆಯ ತೇರದಾಳದಿಂದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನಿಂದ ಸ್ಪರ್ಧಿಸಲು ಬಯಸಿದ್ದರು, ಆದರೆ ಟಿಕೆಟ್ ಕೈ ತಪ್ಪಿತ್ತು, ಸೀತಾರಾಮ್ ಅವರ ಪುತ್ರ ಎಂ.ಎಸ್. ರಕ್ಷಾ ರಾಮಯ್ಯ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಸುಧಾಮ್ ದಾಸ್ ಅವರು ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಿದ್ದರು.