ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನದ ವಿರುದ್ಧ ಇಂಡಿಯಾ ಒಕ್ಕೂಟ ಪ್ರತಿಭಟನೆ
ಬೆಂಗಳೂರು: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಕ್ರಮ ಬಂಧನ ಖಂಡಿಸಿ ಹಾಗೂ ಸಂವಿಧಾನದ, ಪ್ರಜಾಪ್ರಭುತ್ವದ ಉಳಿವಿಗಾಗಿ ಮೋದಿ ಸರ್ಕಾರದ ದುಷ್ಕೃತ್ಯಗಳನ್ನು ವಿರೋಧಿಸಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದಲ್ಲಿ ‘ಇಂಡಿಯಾ’ ಒಕ್ಕೂಟದ ಮುಖಂಡರನ್ನು ಒಳಗೊಂಡಂತೆ ಇಂದು ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು ಜಾರಿ ನಿರ್ದೇಶನಾಲಯ, ಸಿಬಿಐ, ತೆರಿಗೆ ಇಲಾಖೆ ಮುಂತಾದ ತನಿಖಾ ಸಂಸ್ಥೆಗಳ ಮೂಲಕ ವಿರೋಧಿ ಮುಖಂಡರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ಕಿಡಿಕಾರಿದರು.
ಚೀನಾ, ರಷ್ಯಾ, ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳಲ್ಲಿ ಸರ್ವಾಧಿಕಾರಿ ಕೃತ್ಯಗಳು ನಡೆಯುತ್ತಿರುವ ಬಗ್ಗೆ ಕೇಳಿದ್ದೆವು. ಆದರೆ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತವೂ ಸರ್ವಾಧಿಕಾರದತ್ತ ಜಾರಿರುವುದು ಆಘಾತಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನು ಇದನ್ನು ಜನಸಾಮಾನ್ಯರು ಅರಿಯದೆ, ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ಅಪಾಯ ಕಾದಿದೆ. ಪ್ರಜೆಗಳ ಪರಮೋಚ್ಚ ಹಕ್ಕಾಗಿರುವ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಪ್ರಜೆಗಳನ್ನು ಎಚ್ಚರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ತಿಳಿಸಿದರು.
ಇದೇ ವೇಳೆ ಮೋದಿ ಸರ್ಕಾರದ ಕ್ರೌರ್ಯವನ್ನು ವಿರೋಧಿಸಿ ಜನಸಾಮಾನ್ಯರೂ ಸ್ವ ಇಚ್ಛೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೋದಿ ಸರ್ಕಾರಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎಎಪಿಯ ಪ್ರಮುಖ ನಾಯಕರು ಸೇರಿದಂತೆ ಹಲವಾರು ಮುಖಂಡರು ಮಾತನಾಡಿದರು. ಪ್ರತಿಭಟನೆಯಲ್ಲಿ ಎಎಪಿ ಹಾಗೂ ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳ ಮುಖಂಡರು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.