ತಜ್ಞರ ಸಲಹೆ ಪಡೆದು ಪಾಲಿಕೆ ಆಯವ್ಯಯ ಅನುದಾನ ಬಳಕೆ : GBA ದಕ್ಷಿಣ ಆಯುಕ್ತ
ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಬೇಸಿಗೆಕಾಲದಲ್ಲಿ ವಿಪರೀತ ತಾಪಮಾನ ಇದ್ದು, ಮುಂದಿನ ದಿನಗಳಲ್ಲಿ ತಾಪಮಾನ ತಗ್ಗಿಸುವ ದೃಷ್ಟಿಯಿಂದ ಗ್ರೀನ್ ಬೆಂಗಳೂರು ದಕ್ಷಿಣ ಅನುದಾನದಡಿಯಲ್ಲಿ ಸಾರ್ವಜನಿಕ ಪ್ರದೇಶಗಳು ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ದೇಶಿ ತಳಿಯ ಮರಗಳ ಸಸಿ ನೆಟ್ಟು ರಕ್ಷಾ ಕವಚ ಅಳವಡಿಸಿ ಪೋಷಿಸುವುದು ಅಗತ್ಯ ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟರು.

ಬೆಂಗಳೂರು: ದಕ್ಷಿಣ ನಗರ ಪಾಲಿಕೆಯ ಆಯುಕ್ತ ಕೆ ಎನ್ ರಮೇಶ್ ಅವರು ಈ ಸಾಲಿನ ಪಾಲಿಕೆಯ ಆಯವ್ಯಯ ಮಂಡನಾ ಸಭೆಯಲ್ಲಿ ಘೋಷಿಸಿದಂತೆ, ಪಾಲಿಕೆಯ ಅನುದಾನ ಬಳಕೆಯಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಸಾರ್ವಜನಿಕ ಪ್ರತಿನಿಧಿಗಳಾದ ನುರಿತ ತಜ್ಞರ ಜತೆ ಚರ್ಚೆಗಾಗಿ ಇಂದು ಪ್ರಥಮ ಸಭೆಯನ್ನು ಹಮ್ಮಿಕೊಂಡಿದ್ದರು.
ನುರಿತ ತಜ್ಞರಾದ ಅಶ್ವಿನ್ ಮಹೇಶ್, ಪ್ರಸನ್ನ ರಾವ್ ಹಾಗೂ ಪದ್ಮಶ್ರೀ ಬಲರಾಮ್ ಅವರು ಸಭೆಗೆ ಹಾಜರಾಗಿ ಪಾಲಿಕೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಬಳಕೆ ಕುರಿತು ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಿದರು.
ತಾಪಮಾನ ಇಳಿಕೆಗಾಗಿ ಸಸಿ ನೆಡಲು ಕ್ರಮ: ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಬೇಸಿಗೆಕಾಲದಲ್ಲಿ ವಿಪರೀತ ತಾಪಮಾನ ಇದ್ದು, ಮುಂದಿನ ದಿನಗಳಲ್ಲಿ ತಾಪಮಾನ ತಗ್ಗಿಸುವ ದೃಷ್ಟಿಯಿಂದ ಗ್ರೀನ್ ಬೆಂಗಳೂರು ದಕ್ಷಿಣ ಅನುದಾನದಡಿಯಲ್ಲಿ ಸಾರ್ವಜನಿಕ ಪ್ರದೇಶಗಳು ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ದೇಶಿ ತಳಿಯ ಮರಗಳ ಸಸಿ ನೆಟ್ಟು ರಕ್ಷಾ ಕವಚ ಅಳವಡಿಸಿ ಪೋಷಿಸುವುದು ಅಗತ್ಯ ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟರು.
ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳ ಅಕ್ಕ ಪಕ್ಕದ ಖಾಲಿ ಪ್ರದೇಶಗಳನ್ನು ಗುರುತಿಸಿ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವ ದೃಷ್ಟಿಯಿಂದ ಆಯಾ ರಸ್ತೆಗಳ ಪಕ್ಕದಲ್ಲಿರುವ ಸರ್ಕಾರಿ ಅಥವಾ ಖಾಸಗಿ ಖಾಲಿ ಪ್ರದೇಶಗಳು ಇದ್ದರೆ ಅವುಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಬಸ್ ಬೇ ನಿರ್ಮಾಣ, ಪುಟ್ ಪಾತ್ ನಿರ್ಮಾಣ ಮಾಡಲು ಆಯಾ ಜಾಗದ ಮಾಲೀಕರೊಂದಿಗೆ ಚರ್ಚಿಸಿ, ಒಡಂಬಡಿಕೆ ಮಾಡಿಕೊಳ್ಳುವ ಸಲುವಾಗಿ ಸದರಿ ಮಾಹಿತಿಯನ್ನು ಮುಂದಿನ ಸಭೆಗೆ ಹಾಜರು ಪಡಿಸುವಂತೆ ಅಭಿಯಂತರರುಗಳಿಗೆ ಆಯುಕ್ತರು ಸೂಚಿಸಿದರು.
ವಿದ್ಯುತ್ ವೆಚ್ಚ ಕಡಿತಗೊಳಿಸಲು ಸೌರಶಕ್ತಿ ಬಳಕೆಗೆ ಒತ್ತು ನೀಡಿ: ಪಾಲಿಕೆ ವ್ಯಾಪ್ತಿಯ ಬೀದಿ ದೀಪಗಳ ವಿದ್ಯುತ್ ಬಳಕೆ ವೆಚ್ಚವನ್ನು ಕಡಿಮೆ ಮಾಡಲು ಸೌರಶಕ್ತಿಯ ಬೀದಿ ಬಳಕೆ ಅತಿ ಮುಖ್ಯ ಹಾಗೂ ಪಾಲಿಕೆಯ ಎಲ್ಲಾ ಕಟ್ಟಡಗಳಲ್ಲಿಯೂ ಕಡ್ಡಾಯವಾಗಿ ಸೌರಶಕ್ತಿಯ ಪ್ಯಾನೆಲ್ ಅಳವಡಿಸುವುದು ಸೂಕ್ತ ಎಂದು ತಜ್ಞರು ತಿಳಿಸಿದರು. ಬೀದಿ ದೀಪಗಳ ಯಾವುದೇ ದೂರುಗಳನ್ನು ತಕ್ಷಣವೇ ಪರಿಹರಿಸಲು ಸಿಸಿಎಂಎಸ್ ತಂತ್ರಜ್ಞಾನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸುವಂತೆ ಆಯುಕ್ತರು ವಿದ್ಯುತ್ ವಿಭಾಗದ ಅಭಿಯಂತರರಿಗೆ ಸೂಚನೆ ನೀಡಿದರು.
ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಒತ್ತು ನೀಡಿ: ಪಾಲಿಕೆ ವ್ಯಾಪ್ತಿಯಲ್ಲಿ 74ಕ್ಕೂ ಹೆಚ್ಚು ಸಾರ್ವಜನಿಕ ಶೌಚಾಲಯಗಳು ಇದ್ದು ಹಲವು ಕಡೆ ಸರಿಯಾದ ನೀರಿನ ವ್ಯವಸ್ಥೆ ಹಾಗೂ ನಿರ್ವಹಣೆ ಇರುವುದಿಲ್ಲ. ಸಾರ್ವಜನಿಕ ಶೌಚಾಲಯಗಳಿಗೆ ನಿರಂತರ ನೀರು ಪೂರೈಕೆ, ಶೌಚಾಲಯಗಳ ಸ್ವಚ್ಛತೆಗೆ ಗಮನಹರಿಸಲು ಅಧಿಕಾರಿಗಳಿಗೆ ತಿಳಿಸಿದರು.
ಪೌರಕಾರ್ಮಿಕರು ಹಾಗೂ ಮಾರ್ಷಲ್‌ಗಳ ಜವಾಬ್ದಾರಿಯನ್ನು ನಿಗದಿಪಡಿಸಿ: ಪಾಲಿಕೆ ವ್ಯಾಪ್ತಿಯಲ್ಲಿ ಬ್ಲಾಕ್ ಸ್ಪಾಟ್ಗಳ ನಿವಾರಣೆಗಾಗಿ ಹಾಗೂ ನಗರದ ಸ್ವಚ್ಛತೆಗಾಗಿ ಘನತ್ಯಾಜ್ಯ ನಿರ್ವಹಣ ವಿಭಾಗದ ಎಲ್ಲ ಅಧಿಕಾರಿ ಸಿಬ್ಬಂದಿಗಳಿಗೆ, ಮಾರ್ಷಲ್ ಗಳು ಹಾಗೂ ಪೌರಕಾರ್ಮಿಕರುಗಳಿಗೆ ಅವರವರ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಪುನರ್ ನಿಗದಿಪಡಿಸಿ ಆದೇಶ ಹೊರಡಿಸುವುದು ಸೂಕ್ತ ಎಂದು ತಿಳಿಸಿದರು
ಡೇಟಾ ಬೇಸ್ ಸಿದ್ಧಪಡಿಸಿ: ಪಾರ್ಕ್ ಹಾಗೂ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಶೌಚಾಲಯ, ಲೈಟಿಂಗ್, ಗೇಟ್ ನಿರ್ಮಾಣ, ತಂತಿ ಬೇಲಿ ಹಾಗೂ ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಇದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಡೇಟಾ ಬೇಸ್ ಸಿದ್ಧಪಡಿಸಿ ಮುಂದಿನ ಸಭೆಯಲ್ಲಿ ನೀಡುವಂತೆ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಅಸ್ಪತ್ರೆ ಹಾಗೂ PHC ಗಳಿಗೆ ಅವಶ್ಯವಿರುವ ನರ್ಸ್ ವಿವರ ಸಿದ್ಧಪಡಿಸಿ: ಹಲವಾರು ನರ್ಸಿಂಗ್ ಕಾಲೇಜುಗಳು ತಾತ್ಕಾಲಿಕವಾಗಿ ನರ್ಸ್ ಗಳನ್ನು ಒದಗಿಸಲು ಮುಂದೆ ಬಂದಿದ್ದು, ಪಾಲಿಕೆ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಶುಶ್ರೂಷೆಗೆ ಅವಶ್ಯವಿರುವ ನರ್ಸ್ ವಿವರಗಳನ್ನು ಮುಂದಿನ ಸಭೆಯೊಳಗಾಗಿ ನೀಡಲು ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.
ಈ ವೇಳೆ ಪಾಲಿಕೆಯ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಕೆ. ವಿ. ರವಿ, ಕಾರ್ಯಪಾಲಕ ಅಭಿಯಂತರರು, ತೋಟಗಾರಿಕೆ, ಅರಣ್ಯ ಹಾಗೂ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
Related









