ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನ್ಯುಮೋಕೋಕಲ್ ಕಾಂಜುಗೇಟ್ ಲಸಿಕೆ (PCV)ಯನ್ನು 5 ವರ್ಷ ದೊಳಗಿನ ಮಕ್ಕಳಿಗೆ ಹಾಕಿಸಲು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮನವಿ ಮಾಡಿದ್ದಾರೆ.
ನ್ಯುಮೋನಿಯಾ ಲಸಿಕೆ ಸಂಬಂಧಿಸಿದಂತೆ ಆರೋಗ್ಯ ಅಧಿಕಾರಿಗಳ ಜತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ನ್ಯುಮೋನಿಯಾ ಹರಡದಂತೆ ಪಾಲಿಕೆ ಆರೋಗ್ಯ ಇಲಾಖೆಯ ವತಿಯಿಂದ ನ್ಯುಮೋಕೋಕಲ್ ಕಾಂಜುಗೇಟ್ ಲಸಿಕೆ(PCV)ಯನ್ನು 5 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ನ್ಯುಮೋನಿಯಾ ಎಂದರೇನು?: ಇದು ಶ್ವಾಸಕೋಶದ ಸೋಂಕು, ಶ್ವಾಸಕೋಶದಲ್ಲಿನ ಗಾಳಿಯ ಚೀಲಗಳಿಗೆ ಹರಡಿ ಸೋಂಕಿನ ದ್ರವದಿಂದ ಶ್ವಾಸಕೋಶವನ್ನು ಬಲಹೀನಗೊಳಿಸುತ್ತದೆ. ನ್ಯುಮೋನಿಯಾ ಸೋಂಕು ಎರಡು ಶ್ವಾಸಕೋಶಗಳಿಗೂ ಹರಡಬಹುದು. ಸರಿಯಾದ ಸಮಯಕ್ಕೆ ಸರಿಯಾದ ಆರೈಕೆಯಿಂದ ಸೋಂಕು ತಗುಲಿದ ಮಗುವನ್ನು ರಕ್ಷಿಸಬಹುದು ಎಂದು ತಿಳಿಸಿದರು.
ನ್ಯುಮೋನಿಯಾ ರೋಗದ ಲಕ್ಷಣಗಳು: 1. ಕೆಮ್ಮು ಮತ್ತು ನೆಗಡಿ. 2. ತೀವ್ರ ಜ್ವರ. 3. ಉಸಿರಾಟದ ತೊಂದರೆ, ಉಸಿರಾಟದ ಸಮಯದಲ್ಲಿ ಪಕ್ಕೆ ಅಥವಾ ಎದೆಯ ಸೆಳೆತ. 4. ತೀವ್ರ ಉಸಿರಾಟ.
- ಹಸಿವು ಇಲ್ಲದಿರುವುದು, ಆಹಾರ ಸೇವನೆ ಕಷ್ಟಕರವಾಗುವುದು. 6. ಸುಸ್ತು. 7. ಫಿಟ್ಸ್ ಬರುವುದು. 8. ಕೆಮ್ಮು ಮತ್ತು ಹಳದಿ / ರಕ್ತದ ಕಫ ಬರುವುದು ಈ ಎಲ್ಲ ಲಕ್ಷಣಗಳು ಕಾಣಿಸಿಕೊಂಡಲ್ಲಿ ಹತ್ತಿರದ ಸರ್ಕಾರಿ ವೈದ್ಯರನ್ನು ಭೇಟಿ ಮಾಡಬೇಕು ಎಂದು ಸಲಹೆ ನೀಡಿದರು.
ತಡೆಗಟ್ಟುವ ಸರಳ ಪರಿಹಾರಗಳು: 1. ಮಗುವಿಗೆ ಮೊದಲ 6 ತಿಂಗಳು ಸಂಪೂರ್ಣವಾಗಿ ಎದೆಹಾಲು ನೀಡುವುದು. 2. ವಿಶೇಷವಾಗಿ 6 ತಿಂಗಳಿನಿಂದ 2 ವರ್ಷದೊಳಗಿನ ಮಕ್ಕಳಿಗೆ ಉತ್ತಮ ಪೋಷಣೆ ನೀಡುವುದು.3. ಸುರಕ್ಷಿತ ಕುಡಿಯುವ ನೀರು ಮತ್ತು ಉತ್ತಮ ನೈರ್ಮಲ್ಯ.
- ಸಾಬೂನು ಬಳಸಿ ಕೈಗಳನ್ನು ಶುಚಿಗೊಳಿಸುವುದು. 5. ಮಗುವಿಗೆ ಸಮಯಕ್ಕೆ ಸರಿಯಾಗಿ ಚುಚ್ಚುಮದ್ದು ಹಾಕಿಸುವುದು. 6. ಮನೆಯೊಳಗೆ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ. 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ನ್ಯುಮೋಕೋಕಲ್ ಕಾಂಜುಗೇಟ್ ಲಸಿಕೆ ಹಾಕಿಸಬೇಕು.