ಬೆಂಗಳೂರು: ಭಾರತದ ಸಂಸ್ಕೃತಿಯ ಬಗ್ಗೆ ಇಡೀ ವಿಶ್ವವೇ ಕೊಂಡಾಡುತ್ತಿದೆ ಮತ್ತು ಅನೇಕ ರಾಷ್ಟ್ರಗಳು ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಂಡಿವೆ. ಆದರೆ ಭಾರತೀಯರಾದ ನಾವೇ ನಮ್ಮ ಈ ಸಂಸ್ಕೃತಿಯನ್ನು ಮರೆತು ವಿದೇಶೀ ಸಂಸ್ಕೃತಿಗೆ ಮಾರು ಹೋಗಿರುವುದು ಅತ್ಯಂತ ದುರ್ದೈವ ಎಂದು ಚಲನ ಚಿತ್ರ ನಟಿ ಆರ್. ಕಲಾವತಿ ವಿಷಾದಿಸಿದ ವ್ಯಕ್ತಪಡಿಸಿದರು.
ಬೆಂಗಳೂರಿನ ಡಾ ಎಚ್. ಕೃಷ್ಣಮೂರ್ತಿಯವರ ನೇತೃತ್ವದ ವಂದೇ ಮಾತರಂ ಸಾಂಸ್ಕೃತಿಕ ವೇದಿಕೆ ಮತ್ತು ಜನನಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯ ಸಂಸ್ಮರಣಾರ್ಥ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಸುಮಾರು ಮೂವತ್ತು ಜನ ಸಾಧಕರು ಹಾಗೂ ಆದರ್ಶ ದಂಪತಿಗಳನ್ನು ಗೌರವಿಸಿ ಸನ್ಮಾನಿಸಿದ ಸಮಾರಂಭದಲ್ಲಿ ಮಾತನಾಡಿ, ಮುಖ್ಯವಾಗಿ ತಾಯಂದಿರು ತಮ್ಮ ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಈ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ವೆಂಕಟ ನಾರಾಯಣ, ಕನ್ನಡ ರತ್ನ ಡಾ. ಮಂಜೇಗೌಡ, ಕನ್ನಡ ಸಿರಿ ಆನಂದ ಕುಮಾರ್, ಡಾ.ಕೃಷ್ಣೇಗೌಡ, ಸುಧಾಕರ್ ಕುನಂನೇನಿ, ಚಿತ್ರ ನಟ ನಿರ್ದೇಶಕ, ನಿರ್ಮಾಪಕ ಪುರುಷೋತ್ತಮ್ (ಓಂಕಾರ್), ಶೋಭಾ ರಾಣಿ, ವಿಜಯ, ಶಿವಶಂಕರ್, ಹೋರಾಟಗಾರ ಚಲುವ ನಾರಾಯಣಸ್ವಾಮಿ, ಮಾಕಳಿಯ ಸೃಷ್ಟಿ ಸಮೂಹ ಸಂಸ್ಥೆಯ ಶಿಕ್ಷಕ ನಂಜುಂಡಸ್ವಾಮಿ ಡಿ.ಎಚ್. ಮುಂತಾದವರು ವಿವಿಧ ರಾಷ್ಟ್ರನಾಯಕರು ಮತ್ತು ಸ್ವಾತಂತ್ರ್ಯ ಸೇನಾನಿಗಳ ಹೆಸರಿನ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಮೈಸೂರು ರಮಾನಂದ್ ಹಾಸ್ಯ ನಾಟಕ ಮತ್ತು ವರನಟ ಡಾ.ರಾಜಕುಮಾರ್ ಮತ್ತು ಪಿ.ಬಿ. ಶ್ರೀನಿವಾಸ್ ಅವರ ಸಿರಿಕಂಠ ಮಾಧುರ್ಯದ ದನಿಯಲ್ಲಿ ಜ್ಯೂ. ರಾಜಕುಮಾರ್ ಮತ್ತಿತರರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.