-
ಅರ್ಜಿ ಸಲ್ಲಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳಲ್ಲೂ ಕಳೆದ ಮೂರೂವರೆ ವರ್ಷದಿಂದ ವೇತನ ಪರಿಷ್ಕರಣೆ ಆಗದಿರುವುದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.
ಫೆ.8ರಂದೇ ಹೈ ಕೋರ್ಟ್ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಸಿದ್ದು ಫೆ.9ರಂದು ಅರ್ಜಿ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠದ ಮುಂದೆ ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ವಕೀಲರಾದ ಎಚ್.ಬಿ. ಶಿವರಾಜು ಅವರು ಈ ಸಂಬಂಧ ವಾದ ಮಂಡಿಸಿದ್ದರು. ಈ ವೇಳೆ ನೌಕರರ ವೇತನ ಪರಿಷ್ಕರಣೆ ಮಾಡುವಂತೆ ನಾಲ್ಕೂ ನಿಗಮಗಳು ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ವೇತನ ಪರಿಷ್ಕರಣೆ ಸಂಬಂಧ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನ್ಯಾಯಪೀಠ ಫೆ.28 ರವರೆಗೂ ಕಾಲಾವಕಾಶ ನೀಡಿ ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು. ಆದರೆ ಇಂದು (ಫೆ.28) ಮತ್ತೊಮ್ಮೆ ಕಾಲವಕಾಶ ನೀಡಿರುವ ನ್ಯಾಯಪೀಠ ವೇತನ ಪರಿಷ್ಕರಣೆ ಬಗ್ಗೆ ಸಂಬಂಧಪಟ್ಟವರ ಸಭೆ ನಡೆಸಿ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾರ್ಚ್ 10ರೊಳಗೆ ವರದಿ ನೀಡುವಂತೆ ಸೂಚಿಸಿದೆ.
ನಾಲ್ಕು ವರ್ಷಗಳಿಗೊಮ್ಮೆ ಸಾರಿಗೆ ನೌಕರರ ವೇತನ ಪರಿಷ್ಕರಣೆ ಆಗುತ್ತಿತ್ತು. ಅದರಂತೆ 2020ರ ಜನವರಿ 1ರಂದೆ ವೇತನ ಪರಿಷ್ಕರಣೆ ಆಗಬೇಕಿತ್ತು. ಆದರೆ ಈವರೆಗೂ ಅದನ್ನು ಮಾಡುವಲ್ಲಿ ಸರ್ಕಾರ ಮತ್ತು ನಿಗಮಗಳ ಆಡಳಿತ ಮಂಡಳಿ ಮೀನಮೇಷ ಎಣಿಸುತ್ತಿರುವುದರಿಂದ ಬೇಸತ್ತ ಕೆಎಸ್ಆರ್ಟಿಸಿ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಜಯದೇವ್ ಎಂ. ಹಾಗೂ ಇತರರು ಹೈಕೋರ್ಟ್ ಮೆಟ್ಟಿಲೇರಿದ್ದು ವೇತನ ಹೆಚ್ಚಳ ಮಾಡಲು ಸೂಚಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.
ಇನ್ನು 2020ರ ಜನವರಿ ಒಂದರಿಂದಲೇ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಮಾಡಲು ಕೆಎಸ್ಆರ್ಟಿಸಿ ನಿಗಮಕ್ಕೆ ಸೂಚಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ, ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೆಎಸ್ಆರ್ಟಿಸಿಯ ನಾಲ್ಕು ನಿಗಮಗಳ (ಕೆಎಸ್ಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ, ಕೆಕೆಆರ್ಟಿಸಿ(ಎನ್ಇಕೆಆರ್ಟಿಸಿ), ಬಿಎಂಟಿಸಿ) ಎಂಡಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಕೆಎಸ್ಆರ್ಟಿಸಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲ ಎಚ್.ಬಿ. ಶಿವರಾಜು ಅವರು ಶೇ.45ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ವಾದ ಮಂಡಿದ್ದಾರೆ. ಈ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು 4 ನಿಗಮಗಳಿಗೆ ಹಾಗೂ ಸರ್ಕಾರಕ್ಕೆ ನ್ಯಾಯಪೀಠ ಮಾರ್ಚ್ 10ರವೆಗೂ ಕಾಲಾವಕಾಶ ನೀಡಿದೆ.
ಕಳೆದ 2020ರ ಜನವರಿ 1ರಿಂದ ಅಂದರೆ ಸರಿ ಸುಮಾರು ಮೂರೂವರೆ ವರ್ಷದ ಹಿಂದೆಯೇ ನಾಲ್ಕೂ ನಿಗಮಗಳ ಅಧಿಕಾರಿಗಳಿಗೆ ಮತ್ತು ನೌಕರರಿಗೆ ವೇತನ ಪರಿಷ್ಕರಣೆ ಆಗಬೇಕಿತ್ತು. ಆದರೆ ಈವರೆಗೂ ಆಗಿಲ್ಲ. ಹೀಗಾಗಿ ಅಧಿಕಾರಿಗಳು ಮತ್ತು ನೌಕರರು ಕಳೆದ ಮೂರೂವರೆ ವರ್ಷದಿಂದಲೂ ವೇತನ ಹೆಚ್ಚಳವಿಲ್ಲದೆ ದುಡಿಯುತ್ತಿದ್ದಾರೆ. ಹೀಗಾಗಿ ಅವರ ವೇತನ ಪರಿಷ್ಕರಣೆಗಾಗಿ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಇನ್ನು ವೇತನ ಸೇರಿದಂತೆ ನೌಕರರಿಗೆ ನಿಗಮಗಳಲ್ಲಿ ಆಗುತ್ತಿರುವ ಅನೇಕ ಸಮಸ್ಯೆಗಳನ್ನು ವಿವರವಾಗಿ ಸುಮಾರು 60 ಪುಟಗಳನ್ನೊಳಗೊಂಡ ಈ ಅರ್ಜಿಯನ್ನು ಹೈ ಕೋರ್ಟ್ಗೆ ಸಲ್ಲಿಸಲಾಗಿದೆ ಎಂದು ವಿಜಯಪಥಕ್ಕೆ ವಕೀಲರಾದ ಶಿವರಾಜು ಮಾಹಿತಿ ನೀಡಿದ್ದಾರೆ.