ಕ್ಷಮಿಸಿ ಬರೆಯುವುದು ರೂಢಿಯಾಗಿದೆ ನನಗೆ ಇನ್ನು ನಿಲ್ಲಿಸಲಾಗುವುದಿಲ್ಲ..
ಈ ಕ್ಷಣಿಕ ಬದುಕಿನ ಸುಖ ಸಂತಸ ನೆಮ್ಮದಿಯನ್ನಷ್ಟೇ ಅಲ್ಲ
ಹುಡುಕಿದ ಪ್ರೀತಿಯನ್ನು ಕವಿತೆಯಾಗಿಸಿದ್ದೇನೆ ನಾನು
ಬರೆಯುತ್ತೇನೆ ನಾನು ಯಾರನ್ನೋ ಬೆರೆಯುವ ಉಮ್ಮೇದಿಯಿಂದಲ್ಲ
ಮನಸ್ಸಿನ ದುಗುಡ ಹಂಚಿ ಹಗುರಾಗುವ ಇರಾದೆಯಿಂದಲ್ಲ…ಯಾರೋ ವಿನಕಾರಣ ಹಳಿದು ದೂರಿ ದೂರ ಮಾಡಿದರೆಂದಲ್ಲ
ಬರೆಯುತ್ತೇನೆ ಒಮ್ಮೊಮ್ಮೆ ಯಾರನ್ನೋ ಕುಟುಕವುದಕ್ಕೆಂದಲ್ಲ
ಇನ್ಯಾರ ಬಗ್ಗೆಯೋ ಬರೆದು ಗೋಳು ಹುಯ್ಯುವುದಕ್ಕೂ ಅಲ್ಲ…
ಬರೆಯುತ್ತೇನೆ ಒಮ್ಮೊಮ್ಮೆ ನನ್ನ ಬರಹಗಳು ಯಾರದೋ ಕಣ್ಣೀರಿಗೆ ಸಾಂತ್ವನ ನೀಡಲಿ ಎಂದು, ಅನ್ಯಾಯಗಳ ಪ್ರತಿಭಟಿಸುವ ಧ್ವನಿಯಾಗಲಿ ಎಂದು ಆದರೆ, ಯಾರೋ ಮರುಗಲಿ ಎಂದು ಇಲ್ಲ ಸಲ್ಲದ ಕತೆಗಳ ಕಟ್ಟಿದವನೂ ಅಲ್ಲ..ಸತ್ಯವನ್ನು ಬಿಟ್ಟು ಮತ್ತೆನೋ ಬರೆದವನಲ್ಲ
ಈ ಬದುಕೆಂಬ ಹಾಳೆಯಲ್ಲಿ ಏನು ಬರೆಯಬೇಕೆಂದು ಅರಿತುಕೊಂಡೇ ಬರೆಯುತ್ತೇನೆ.
ಬರೆದದ್ದು ಕಾಲ್ಪನಿಕವೂ ಇರಬಹುದು ಅಲ್ಲಗಳೆಯುವುದಿಲ್ಲ ನಾನು ಆದರೂ ನೋವಿದೆ ನನಗೆ ಅಕ್ಷರಕ್ಕೂ ಹಾದರದ ಕತೆ ಕಟ್ಟುವ ಲೋಕವಿದೆ ಎಂದು
ಬರೆಯುತ್ತೇನೆಂದ ಮಾತ್ರಕ್ಕೆ ನಾನೊಬ್ಬ ಪ್ರಖಾಂಡ ಪಂಡಿತ ಅಂತೆನೂ ಅಲ್ಲ… ಓದುಗರ ಸಂಖ್ಯೆ ಇಳಿಯುವುದನು ನೋಡಿ ಬರೆದ ಬರವಣಿಗೆಯನ್ನೆಲ್ಲ ಪುಸ್ತಕವಾಗಿಸಲೂ ಇಲ್ಲ…
ಹೃದಯ ತೆರೆದು, ಕತ್ತಲೆಗೆ ಚಿಮಣಿ ಬುಡ್ಡಿ,ಕಂದೀಲು,ಕ್ಯಾಂಡಲ್ಲುಗಳ ಹಿಡಿದು ಬರೆಯುತ್ತೇನೆ ಒಮ್ಮೊಮ್ಮೆ ಬೆಳಕಾಗಲಿ ಎಂದು…ಬೆಳಕಾದೀತು ಎಂದು
ಮತ್ತೆ ಮತ್ತೆ ಬರೆ-ಬರೆದು ಹಂಚಿಕೊಳ್ಳುತ್ತೇನೆ ವಾಟ್ಸಪ್ಪು ಫೆಸ್ ಬುಕ್ಕುಗಳಲ್ಲಿ ಜನ ನನ್ನನ್ನು ಗುರುತಿಸಲಿ ಅಥವಾ ಸನ್ಮಾನಿಸಲಿ ಅಂತಲೂ ಅಲ್ಲ
ಬರೆಯುತ್ತೇನೆ ಮತ್ತೊಬ್ಬರಿಗೆ ಸ್ಫೂರ್ತಿ ಆಗಲಿ ಎಂದು, ಮತ್ತೆ ಯಾರಾದರೂ ಬರವಣಿಗೆಯ ಹಿಲಾಲು ಹೊತ್ತಿಸಲಿ ಎಂದು.
ಬರೆಯುತ್ತೇನೆ ಒಮ್ಮೊಮ್ಮೆ ನೊಂದ ಹೃದಯಗಳ ಸಂತೈಸುವ ಮನಸ್ಸುಗಳಿವೆ ಎಂದು ಮತ್ತಷ್ಟು ಹೃದಯಗಳಿಗೆ ನನ್ನ ಅಕ್ಷರದ ಮೇಲೆ ಒಂದು ಹಿಡಿ ಪ್ರೀತಿ ಇದೆ ಎಂದು…
ನಾನು
ಬರೆದ ಅಕ್ಷರಗಳ ಓದಿ, ಹಂಚುತ್ತ, ಖುಷಿ ಪಡುವ ಜೀವಗಳಿವೆ ಎಂದು…. ಎಷ್ಟೋ ಸಲ ನಾನು ಬರೆದ ಅಕ್ಷರಗಳು ಆತ್ಮಹತ್ಯೆಗೂ ಪ್ರಯತ್ನಿಸಿವೆ ಬಿಡಿ ನನ್ನ ಆತ್ಮ ಸಾಕ್ಷಿ ಒಪ್ಪಲಿಲ್ಲವೆಂದು
ಆದರು ಬರೆಯುತ್ತೇನೆ ನನ್ನ ಆತ್ಮಕ್ಕೆ ಸಮಾಧಾನವಿದೆ ಎಂದು
ಬರೆಯುತ್ತೇನೆ ನಾನು ಇದನ್ನು ಓದಿದವರು ಮತ್ತ್ಯಾರೋ ಬದಲಾಗಲಿ ಅಂತೇನೂ ಅಲ್ಲ.
ಕಾಲದ ತುಳಿತಕ್ಕೆ ಸಿಕ್ಕು ಕಳಚಿದ ಯಾರದೋ ಸಂಬಂಧಗಳು ಮತ್ತೆ ಬೆಸುಗೆ ಆಗಲಿ ಎಂದು…
ಬರೆಯುತ್ತೇನೆ ಒಮ್ಮೊಮ್ಮೆ ನನ್ನ ಬರವಣಿಗೆ ನೋಡಿ ಬೇರೆಯವರು ಶಬ್ಬಾಶ್ ಅನ್ನುವುದು ನೋಡಿ ಕರುಬಿದವರಲ್ಲೇ….
ಇವನಿಗೆ ಹುಚ್ಚು ಹಿಡಿದಿದೆ ಎಂದು, ತಲೆ ಕೆಟ್ಟಿದೆ ಎಂದು, ಮಾನಸಿಕ ಅಸ್ವಸ್ಥನೆಂದು, ತೀರ ಭಾವುಕನೆಂದು ಆಡಿಕೊಂಡವರೆಲ್ಲ ಒಮ್ಮೆಯಾದರೂ ನನ್ನ ಬರವಣಿಗೆಯ ಮೆಚ್ಚಿ ನನ್ನನ್ನು ಮೆಚ್ಚಿ ಒಪ್ಪಿ ಅಪ್ಪಿಕೊಂಡಾರೆಂದು….
ಸಾಧ್ಯವಾದಷ್ಟು ಬರವಣಿಗೆಯಲ್ಲಿ ಮಾವಿನ ಬೀಜಗಳನ್ನೆ ಬಿತ್ತಿದ್ದೇನೆ ನಾನು, ಭರವಸೆ ಇದೆ ನನಗೆ ಬಿತ್ತಿದ ಮಾವಿನ ಬೀಜಕ್ಕೆ ಬೇವಿನ ಫಸಲು ಎಂದಿಗೂ ಬರುವದಿಲ್ಲವೆಂದು.
– ದೀಪಕ ಶಿಂಧೇ, 9482766018