ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಸ್ ಟಿಕೆಟ್ ಕಳೆದುಕೊಂಡಿದ್ದರಿಂದ ಭಯಗೊಂಡ ನಿರ್ವಾಹಕರು ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಬಳಿ ಆಕೆಯನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ.
ನಿರ್ವಾಹಕರು ತನಿಖಾಧಿಕಾರಿಗಳ ಭಯಕ್ಕೆ ಆಕೆಯನ್ನು ಕೆಳಗಿಳಿಸಿ ಹೋಗಿದ್ದಾರೆ. ಆದರೆ ಇದು ಅಮಾನವೀಯ ಘಟನೆ, ಹಣ ಪಡೆದೆ ಆಕೆಗೆ ಮತ್ತೊಂದು ಟಿಕೆಟ್ ಕೊಡಬಹುದಿತ್ತು ಎಂದು ಪ್ರಯಾಣಿಕರು ನಿರ್ವಾಹಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ, ಈ ರೀತಿ ಟಿಕೆಟ್ ಕಳೆದುಕೊಂಡ ಮಹಿಳೆಯರಿಗೆ ಬದಲಿ ಟಿಕೆಟ್ ಕೊಟ್ಟು, ಇದೇ ವೇಳೆಗೆ ತನಿಖಾ ಸಿಬ್ಬಂದಿ ಬಂದು ಟಿಕೆಟ್ ಚೆಕ್ ಮಾಡಿದ್ದರೆ ನಿರ್ವಾಹಕರ ವಿರುದ್ಧ ಕಾನೂನಿ ರೀತಿ ಕ್ರಮ ತೆಗೆದುಕೊಂಡು ಅವರನ್ನು ಅಮಾನತು ಮಾಡುವ ಸಾಧ್ಯತೆ ಇತ್ತು. ಹೀಗಾಗಿ ಇಲ್ಲಿ ನಿರ್ವಾಹಕರು ಇನ್ನೊಂದು ಟಿಕೆಟ್ ಕೊಡಲು ನಿರಾಕರಿಸಿದ್ದಾರೆ ಎಂಬುವುದು ಇಲ್ಲಿ ಸ್ಪಷ್ಟ.
ಘಟನೆ ವಿವರ: ಹೊಸದುರ್ಗ ತಾಲೂಕಿನ ಸಾಲಕಟ್ಟೆ ಸಮುದಾಯ ಆರೋಗ್ಯ ಅಧಿಕಾರಿ ಚೈತ್ರಾ ಎಂಬುವರು ಬುಧವಾರ ಸಾಲಕಟ್ಟೆ ಗೇಟ್ ನಿಂದ ಹೊಸದುರ್ಗ ತಾಲೂಕು ಶ್ರೀರಾಂಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಮಹಿಳೆಯರಿಗೆ ವಿತರಿಸುವ ಉಚಿತ ಟಿಕೆಟ್‌ಅನ್ನು ನಿರ್ವಾಹಕರು ಕೊಟ್ಟಿದ್ದಾರೆ.
ಆದರೆ, ಚೈತ್ರಾ ಆ ಟಿಕೆಟ್ ಕಳೆದುಕೊಂಡಿದ್ದಾರೆ. ಈ ವೇಳೆ ಅವರಿಗೆ ಬದಲಿ ಟಿಕೆಟ್ ಕೊಡಲು ಬರುವುದಿಲ್ಲ ಒಂದು ವೇಳೆ ತನಿಖಾಧಿಕಾರಿಗಳು ತಪಾಸಣೆಗೆ ಬಂದರೆ ನನ್ನನ್ನು ಅಮಾನತು ಮಾಡಬಹುದು ಎಂದು ಹೆದರಿ ಆಕೆಯನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ.
ಇನ್ನು ಈ ಸಂಬಂಧ ನೊಂದ ಚೈತ್ರಾ ಹೊಸದುರ್ಗ ಕೆಎಸ್‌ಆರ್ಟಿಸಿ ಘಟಕಕ್ಕೆ ದೂರು ನೀಡಿದ್ದಾರೆ. ಆಕಸ್ಮಿಕವಾಗಿ ಟಿಕೆಟ್ ಕಳೆದುಕೊಂಡ ಕಾರಣಕ್ಕೆ ಮತ್ತೆ ಟಿಕೆಟ್ ಕೊಡದೆ ಬಸ್‌ನಿಂದ ನನ್ನುನ್ನು ರಸ್ತೆ ಮಧ್ಯೆಯೇ ಇಳಿಸಲಾಗಿದೆ ಎಂದು ದೂರಿದ್ದಾರೆ.
ಸಾಲಕಟ್ಟೆ ಗೇಟ್‌ನಿಂದ ಹೊಸದುರ್ಗ ತಾಲೂಕು ಶ್ರೀರಾಂಪುರಕ್ಕೆ ಬಸ್‌ನಲ್ಲಿ ಬುಧವಾರ ಸಂಜೆ 4.30ರಲ್ಲಿ ನಾನು ಪ್ರಯಾಣಿಸುತ್ತಿದ್ದೆ. ಹುಳಿಯಾರು ಬಸ್ ನಿಲ್ದಾಣದ ಬಳಿ ನನ್ನ ಕೈಯಲ್ಲಿದ್ದ ಟಿಕೆಟ್ ಕೈತಪ್ಪಿ ಬಸ್‌ನಿಂದ ಹೊರಗೆ ಬಿದ್ದಿದೆ. ಈ ಬಗ್ಗೆ ಕಂಡಕ್ಟರ್‌ಗೆ ತಿಳಿಸಿದೆ.
ಅಷ್ಟರಲ್ಲಾಗಲೇ ಹುಳಿಯಾರು ಪಟ್ಟಣ ಬಿಟ್ಟು ಬಸ್ ಮುಂದೆ ಬರುತ್ತಿತ್ತು. ಆ ವೇಳೆ ನಾನು ಇನ್ನೊಂದು ಟಿಕೆಟ್ ಕೊಡಿ ಎಂದು ಕೇಳಿದ್ದು, ಹಾಗೆಲ್ಲ ಕೊಡಲು ಬರುವುದಿಲ್ಲ ಎಂದು ಕಂಡಕ್ಟರ್ ತಿಳಿಸಿದರು. ಶಕ್ತಿ ಯೋಜನೆಯ ಉಚಿತ ಟಿಕೆಟ್ ಬೇಡ ಹಣ ಪಾವತಿಸುತ್ತೇನೆ, ಟಿಕೆಟ್ ಕೊಡಿ ಎಂದು ಕೇಳಿದಾಗ ಕೋಪಗೊಂಡ ಕಂಡಕ್ಟರ್ ಏರು ಧ್ವನಿಯಲ್ಲಿ ಬೈದು ಹುಳಿಯಾರು ಪಟ್ಟಣದ ಹೊರ ವಲಯದಲ್ಲಿ ನನ್ನನ್ನು ಕೆಳಗಿಳಿಸಿದ್ದಾರೆ ಎಂದು ಚೈತ್ರಾ ದೂರು ನೀಡಿದ್ದಾರೆ.
ಬಸ್‌ನಿಂದ ಕೆಳಗಿಳಿದ ಸ್ಥಳದಿಂದ ನಾನು ಖಾಸಗಿ ಬಸ್‌ನಲ್ಲಿ ಹೊಸದುರ್ಗಕ್ಕೆ ಪ್ರಯಾಣ ಮಾಡಿದೆ ಎಂದು ಕೆಎಸ್‌ಆರ್ಟಿಸಿ ಘಟಕ ವ್ಯವಸ್ಥಾಪಕರಿಗೆ ಲಿಖಿತ ದೂರು ನೀಡಿದ್ದಾರೆ ಚೈತ್ರಾ.
ಇನ್ನು ಇದು ಮೊದಲಿಗೆ ಚೈತ್ರಾ ಅವರ ಕಡೆಯಿಂದ ತಪ್ಪಾಗಿದೆ. ಇನ್ನು ಆಕೆಯನ್ನು ತನಿಖಾಧಿಕಾರಿಗಳ ಭಯಕ್ಕೆ ಮಾರ್ಗಮಧ್ಯೆ ಇಳಿಸಿದ್ದು ನಿರ್ವಾಹಕರ ತಪ್ಪುಕೂಡ. ಹೀಗಾಗಿ ಅಧಿಕಾರಿಗಳು ಇಂಥ ಪ್ರಕರಣದ ಬಗ್ಗೆ ನಿಯಮ ರೂಪಿಸುವುದು ಒಳ್ಳೆಯದು ಎಂದು ನೌಕರರು ಒತ್ತಾಯಿಸಿದ್ದಾರೆ.