ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗ ಸಂಸ್ಥೆ (KSRTC) ಬಸ್‌ನಲ್ಲಿ ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಸುಮಾರು 47 ವರ್ಷದ ಮಹಿಳೆಗೆ ಶ್ವಾಸಕೋಶದ ಸಮಸ್ಯೆಯಿಂದ ಉಸಿರಾಟದಲ್ಲಿ ಏರುಪೇರು ಆಗಿರುವುದನ್ನು ಕಂಡು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಿದ ಬಸ್ ಚಾಲಕ ಶಾಂತಪ್ಪ ಹಾಗೂ ನಿರ್ವಾಹಕರ ಕಾರ್ಯ ಶ್ಲಾಘನೀಯವಾದದ್ದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ನೊಂದವರ ಮತ್ತು ಕಷ್ಟದಲ್ಲಿರುವ ಮಂದಿಗೆ ಸದಾ ನೆರವಾಗುವ ಮನಸ್ಸು ಉಳ್ಳವರಾಗುವ ಜತೆಗೆ ಪ್ರತಿಯೊಬ್ಬರೂ ಇಂತಹ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂಬುದು ನನ್ನ ಆಶಯ ಎಂದು ಸಾರಿಗೆ ನಿಗಮಗಳ ನೌಕರರಿಗೆ ಸಲಹೆ ನೀಡಿದ್ದಾರೆ. ಅಲ್ಲದೆ ಈ ಮೂಲಕ ಸಾರಿಗೆ ನಿಗಮದ ನೌಕರರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ ಹೇಳಿದ್ದಾರೆ.
ಘಟನೆ ವಿವರ: ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮಹಿಳೆಗೆ ತುಮಕೂರು ಬಳಿ ಬಸ್ ಬರುತ್ತಿದ್ದಂತೆ ಉಸಿರಾಟದ ಸಮಸ್ಯೆ ಉಂಟಾಗಿದೆ. ಅದನ್ನು ಗಮನಿಸಿ ಮಹಿಳೆಗೆ ಕೆಎಸ್ಆರ್‌ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕ ಕರುಣಾಮಯಿಯಾಗಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿದ್ದಾರೆ.ʼ
ಹೌದು, ಬಸ್‌ನಲ್ಲಿದ್ದ ಸುಮಾರು 47 ವರ್ಷದ ಮಹಿಳೆಗೆ ಶ್ವಾಸಕೋಶದ ಸಮಸ್ಯೆಯಿಂದ ಉಸಿರಾಟದಲ್ಲಿ ಏರುಪೇರು ಆಗಿತ್ತು. ಈ ವೇಳೆ ತಡಮಾಡದೇ ಚಾಲಕ ಶಾಂತಪ್ಪ ಅವರು ಕೂಡಲೇ ಆಸ್ಪತ್ರೆಯತ್ತ ಬಸ್ ಚಲಾಯಿಸಿದ್ದರು. ತುಮಕೂರಿನ ಶಿರಾ ಗೇಟ್ ಸಮೀಪದ ಶ್ರೀದೇವಿ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿ ಮಹಿಳೆಯ ಜೀವ ಉಳಿಸುವ ಮೂಲಕ ಚಾಲಕ ಮತ್ತು ನಿರ್ವಾಹಕ ಮಾನವೀಯತೆ ಮೆರೆದಿದ್ದಾರೆ.
ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಸರ್ಕಾರಿ ಬಸ್‌ನ ಚಾಲಕ ಮತ್ತು ನಿರ್ವಾಹಕರ ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಂದು ಜೀವ ಉಳಿಸಿದ ನಿಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಅಭಿನಂದನೆ ತಿಳಿಸಿದ್ದಾರೆ. ಈ ಬಗ್ಗೆ ಸಚಿವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.