ಗಂಗಾವತಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ನೀವು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತೀರೋ ಅಲ್ಲಿಯವರೆಗೆ ನಿರ್ವಾಹಕರಿಂದ ಉಚಿತ ಟಿಕೆಟ್ ಪಡೆದುಕೊಳ್ಳುವುದನ್ನು ಮರೆಯಬೇಡಿ.
ನಾವು ಉಚಿತವಾಗಿ ಪ್ರಯಾಣಿಸಬಹುದು ಎಂದು ನೀವು ನಿರ್ವಾಹಕರು ಬಂದಾಗ ಅವರಿಂದ ಟಿಕೆಟ್ ಪಡೆಯದೆ ಹೋದರೆ ಅವರಿಗೆ ಶಿಸ್ತು ಕ್ರಮದ ಜತೆಗೆ ದಂಡವನ್ನು ವಿಧಿಸುತ್ತಾರೆ ತನಿಖಾಧಿಕಾರಿಗಳು. ಹೀಗಾಗಿ ಬಸ್ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಮಹಿಳೆಯರು ಉಚಿತ ಟಿಕೆಟ್ ಪಡೆಯುವುದನ್ನು ಮರೆಯಬೇಡಿ ಎಂದು ವಿಜಯಪಥ ಓದುಗರಲ್ಲಿ ಮನವಿ.
ಇನ್ನು ಇದೇ ಜೂನ್ 19ರಂದು ಕನಕಗಿರಿಯಿಂದ ಮಲ್ಲಾಪುರಂವರೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಎಲ್ಲಿಗೆ ಪ್ರಯಾಣಿಸುತ್ತಿದ್ದೇವೆ ಎಂದು ಹೇಳದೆ, ನಿರ್ವಾಹಕರಿಂದ ಟಿಕೆಟ್ ಕೂಡ ಪಡೆದಿಲ್ಲ.
ನಿರ್ವಾಹಕನ ದುರಾದೃಷ್ಟಕ್ಕೆ ಅಂದು ತನಿಖಾಧಿಕಾರಿಗಳು ತಪಾಸಣೆಗೆ ಬಸ್ ಹತ್ತಿದ್ದಾರೆ. ಈ ವೇಳೆ ಕನಕಗಿರಿಯಿಂದ ಮಲ್ಲಾಪುರಂಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಉಚಿತ ಟಿಕೆಟ್ ಪಡೆದುಕೊಂಡಿಲ್ಲದಿರುವುದು ಪತ್ತೆಯಾಗಿದೆ.
ಈ ವೇಳೆ 15 ರೂಪಾಯಿಯ ಒಂದು ಉಚಿತ ಟಿಕೆಟ್ ನೀಡುವಲ್ಲಿ ನೀವು ವಿಫಲರಾಗಿದ್ದೀರಿ ಎಂದು ತನಿಖಾಧಿಕಾರಿಗಳು ನಿರ್ವಾಹಕರಿಗೆ 150 ರೂಪಾಯಿ ದಂಡ ಹಾಕಿದ್ದಾರೆ. ಈ ವೇಳೆ ಟಿಕೆಟ್ ಪಡೆಯದ ಆ ಮಹಿಳೆಗೇ ದಂಡ ಹಾಕಬೇಕು. ಆದರೆ, ಆಕೆ ನಾನು ಉಚಿತ ಪ್ರಯಾಣ ಮಾಡುತ್ತಿದ್ದೇನೆ ಹೀಗಾಗಿ ದಂಡ ಕಟ್ಟುವುದಿಲ್ಲ ಎಂದು ಹೇಳಿದ್ದಾರೆ.
ಆ ಬಳಿಕ ನಿರ್ವಾಹಕನೇ ದಂಡ ಕಟ್ಟಿದ್ದು, ಮೆಮೋ ಕೂಡ ಪಡೆದುಕೊಂಡಿದ್ದಾರೆ. ಇಲ್ಲಿ ನಿರ್ವಾಹಕರು ಆ ಮಹಿಳೆಯಿಂದ ಯಾವುದೆ ಹಣ ಪಡೆಯದಿದ್ದರೂ ಮಹಿಳೆ ಮಾಡಿದ ತಪ್ಪಿಗೆ ನಿರ್ವಾಹಕ 150 ರೂ. ದಂಡ ಕಟ್ಟುವ ಜತೆಗೆ ಮೆಮೋ ಕೂಡ ಪಡೆದು ಅದಕ್ಕೆ ಉತ್ತರ ನೀಡಬೇಕು. ಇನ್ನು ಅಧಿಕಾರಿಗಳು ನಿರ್ವಾಹಕ ಕೊಟ್ಟಿರುವ ಉತ್ತರ ಸಮಂಜಸವಾಗಿಲ್ಲ ಎಂದು ಅಮಾನತು ಮಾಡುತ್ತಾರೆ.
ಇದನ್ನು ನೋಡಿದರೆ ಅತ್ತ ಪುಲಿ ಇತ್ತ ದರಿ ಎಂಬಂತಹ ಸ್ಥಿತಿಯಲ್ಲಿ ನಿರ್ವಾಹಕರು ಸಿಲುಕಿಕೊಂಡಿದ್ದು ಒಂದು ರೀತಿ ಗರಗಸದ ಬಾಯಿಗೆ ಸಿಲುಕಿ ಒದ್ದಾಡುವ ಸ್ಥಿತಿಯಲ್ಲಿ ಇದ್ದಾರೆ. ಇದಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಬೇಕಾದರೆ ಸಾರಿಗೆ ಅಧಿಕಾರಿಗಳು ಯಾರು ಟಿಕಟ್ ಪಡೆಯದೆ ಪ್ರಯಾಣಿಸುತ್ತಾರೋ ಅಂಥ ಮಹಿಳೆಯರಿಗೆ ಮೊದಲು ದಂಡ ಕಟ್ಟುವುದನ್ನು ಕಡ್ಡಾಯ ಮಾಡಬೇಕು.
ಇದರ ಹೊರತು ಮಹಿಳೆಯರು ಉದಾಸೀನತೆಯಿಂದ ನಡೆದುಕೊಂಡು ನಿರ್ವಾಹಕರಿಗೆ ಕಿರಿಕಿರಿಯುಂಟು ಮಾಡುವುದರ ಜತೆಗೆ ಕೆಲಸಕ್ಕೂ ಕುತ್ತು ತರುತ್ತಾರೆ. ಹೀಗಾಗಿ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ನಿರ್ವಾಹಕರಿಗೆ ದಂಡ ಹಾಕುವುದನ್ನು ನಿಲ್ಲಿಸಿ ಉದಾಸೀನತೆಯಿಂದ ನಡೆದುಕೊಳ್ಳುವ ಪ್ರಯಾಣಿಕರಿಂದ ದಂಡ ವಸೂಲಿ ಮಾಡಬೇಕು. ಒಂದು ವೇಳೆ ದಂಡ ಕಟ್ಟುವುದಕ್ಕೆ ನಿರಾಕರಣೆ ಮಾಡಿದರೆ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು.
ಈ ಎಲ್ಲವನ್ನು ಕಾನೂನಿನ ಪ್ರಕಾರ ಮಾಡಿದರೆ ಮುಂದಿನ ದಿನಗಳಲ್ಲಿ ಬಸ್ ಹತ್ತುವ ಪ್ರಯಾಣಿಕರು ಭಯದಿಂದಲಾದರೂ ಟಿಕಟ್ ಪಡೆದುಕೊಂಡು ಪ್ರಯಾಣಿಸುತ್ತಾರೆ. ಇಲ್ಲದೆ ಹೋದರೆ ಅಮಾಯಕ ನಿರ್ವಾಹಕರು ಈ ರೀತಿ ಮೆಮೋ ಪಡೆದು ದಂಡಕಟ್ಟಿಕೊಂಡು ಪರದಾಡುತ್ತಲೇ ಇರುತ್ತಾರೆ.
ಸಂಬಂಧಪಟ್ಟ ಅಧಿಕಾರಿಗಳನ್ನು ಸಂರ್ಪಕಿಸಲು ಬಯಸಿದರೆ ಈ ವೆಬ್ಸೈಟ್ಗೆ ಭೇಟಿ ನೀಡಿ: https://kkrtc.karnataka.gov.in/new-page/Koppal%20Division/en