NEWSಆರೋಗ್ಯದೇಶ-ವಿದೇಶ

ವಿಶ್ವ ಹೈಪರ್ ಟೆನ್ಷನ್ ಡೇ: ಮೂವರಲ್ಲಿ ಒಬ್ಬರಿಗೆ ಹೈಪರ್ ಟೆನ್ಷನ್ – ವಿಶ್ವವನ್ನೇ ಕಾಡುತ್ತಿದೆ ಸೈಲೆಂಟ್ ಕಿಲ್ಲರ್ !

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿಶ್ವದಲ್ಲಿ 30ರಿಂದ 70ರ ವಯಸ್ಸಿನ ನಡುವಿನ 1.28 ಬಿಲಿಯನ್‌ ಜನರು ಹೈಪರ್‌ ಟೆನ್ಷನ್‌ಗೆ ಒಳಗಾಗಿದ್ದಾರೆ. ಒಟ್ಟಾರೆ ಜನಸಂಖ್ಯೆಯ ಮೂವರಲ್ಲಿ ಒಬ್ಬರು ಹೈಪರ್‌ ಟೆನ್ಷನ್ ( ರಕ್ತದ ಒತ್ತಡ) ದಿಂದ ಬಳಲುತ್ತಿದ್ದಾರೆ ಎಂಬ ಅಘಾತಕಾರಿ ವಿಷಯ ಬುಹುತೇಕರಿಗೆ ಗೊತ್ತೇಯಿಲ್ಲ.

ಹೌದು! ಪ್ರತಿ ವರ್ಷ ಮೇ 17ರಂದು ವಿಶ್ವ ಹೈಪರ್‌ ಟೆನ್ಷನ್ ದಿನಾಚರಣೆ ಆಚರಿಸುತ್ತೇವೆ. ಆದರೆ, ಶೇ. 46 ರಷ್ಟು ಮಂದಿ ತಾವು ಹೈಪರ್‌ ಟೆನ್ಷನ್‌ನಿಂದ ಬಳಲುತ್ತಿರುವ ಮಾಹಿತಿಯೇ ಗೊತ್ತಿಲ್ಲ. ಈ ನಡುವೆ ಶೇ.42 ರಷ್ಟು ಮಂದಿಗೆ ಮಾತ್ರ ಚಿಕಿತ್ಸೆ ಪಡೆದು ಗುಣಮುಖರಾಗಲು ಅವಕಾಶವಿದೆ. ಹೀಗಾಗಿ ಶೇ.46 ರಷ್ಟಿರುವ ಹೈಪರ್‌ ಟೆನ್ಷನ್ ಪ್ರಮಾಣವನ್ನು 2030ರ ಒಳಗೆ ಶೇ.33 ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವ ಹೈಪರ್‌ ಟೆನ್ಷನ್ ಲೀಗ್‌ ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸುತ್ತಿವೆ.

ಕರ್ನಾಟಕದಲ್ಲಿ ಹೈಪರ್‌ ಟೆನ್ಷನ್: ಭಾರತದಲ್ಲಿ ಒಟ್ಟಾರೆ ಜನಸಂಖ್ಯೆ ಪೈಕಿ ಪುರುಷರಲ್ಲಿ ಶೇ.26.96, ಮಹಿಳೆಯರಲ್ಲಿ ಶೇ.25 ರಷ್ಟು ಮಂದಿ ಹೈಪರ್‌ ಟೆನ್ಷನ್‌ನಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ಅಧಿಕ ಮಂದಿ ರಕ್ತದ ಒತ್ತಡದಿಂದ ಬಳಲುತ್ತಿದ್ದು, ಪುರುಷರಲ್ಲಿ ಶೇ. 30.7, ಮಹಿಳೆಯರಲ್ಲಿ ಶೇ. 27. 9 ಜನರು ಹೈಪರ್‌ ಟೆನ್ಷನ್‌ನಿಂದ ಬಳಲುತ್ತಿದ್ದಾರೆ ಎಂಬ ಸಂಗತಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 ಯಿಂದ ದೃಢಪಟ್ಟಿದೆ.

ರಕ್ತದ ಒತ್ತಡದಿಂದ ಜನ ಸಾಮಾನ್ಯರು ಹೃದಯಘಾತ, ಸ್ಟ್ರೋಕ್, ಕಿಡ್ನಿ ವೈಫಲ್ಯ ಸೇರಿದಂತೆ ಜೀವಹಾನಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ನಗರ ಪ್ರದೇಶದಲ್ಲಿ ಅನಾರೋಗ್ಯ ಆಹಾರ ಸೇವನೆ, ದೈಹಿಕ ಚಟುವಟಿಕೆ ರಹಿತ ಜೀವನ ಶೈಲಿಯಿಂದ ಹದಿನೈದು ವರ್ಷ ವಯಸ್ಸಿನ ಮಕ್ಕಳು ಹಾಗೂ ಯುವಕರು ಹೈಪರ್‌ ಟೆನ್ಷನ್‌ಗೆ ಒಳಗಾಗುತ್ತಿರುವ ಬಗ್ಗೆ ಡಾ. ಯು.ಎಸ್‌. ವಿಶಾಲ್‌ ರಾವ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಸೈಲೆಂಟ್ ಕಿಲ್ಲರ್ ಹೈಪರ್‌ ಟೆನ್ಷನ್ -ಏನಿದು ರಕ್ತದ ಒತ್ತಡ?: ಹೃದಯ ರಕ್ತವನ್ನು ಪಂಪ್ ಮಾಡುವಾಗ ಅಪದಮನಿ ಗೋಡೆಗಳ ವಿರುದ್ಧ ರಕ್ತದ ಬಲವನ್ನು ಅಳೆಯುತ್ತದೆ. ಇದು ಎರಡು ಅಂಕಿಯನ್ನು ನೀಡುತ್ತದೆ. ಸಿಸ್ಟೋಲಿಕ್ ಒತ್ತಡ, ಹೃದಯ ಬಡಿತ ಅಧರಿಸಿ ನೀಡುವ ದೊಡ್ಡ ಸಂಖ್ಯೆ ಇದಾಗಿದೆ. ಡಿಯಾಸ್ಟೋಲಿಕ್ ಒತ್ತಡ ಎಂದರೆ, ಅತಿ ಕಡಿಮೆ ಸಂಖ್ಯೆ. ಹೃದಯ ಬಡಿತದ ನಡುವಿನ ಹೃದಯದ ವಿಶ್ರಾಂತಿ ವೇಳೆಯನ್ನು ಆಧರಿಸಿ ಇದು ಮಾಪನ ಮಾಡಿ ನೀಡುವ ಸಂಖ್ಯೆ.

ಅಧಿಕ ರಕ್ತದ ಒತ್ತಡವು ಅಪದಮನಿಗಳ ಗೋಡೆಗಳಿಗೆ ಪೆಟ್ಟು ನೀಡಿ, ಹೃದಯಾಘಾತ, ಲಕ್ವಾ, ಕಿಡ್ನಿ ವೈಫಲ್ಯ, ಕಣ್ಣಿನ ದೋಷದಂತಹ ಅಪಾಯ ಕಾಯಿಲೆಗೆ ಗುರಿಪಡಿಸುತ್ತದೆ. ಸಹಜ ರಕ್ತದ ಒತ್ತಡ ಸಾಮಾನ್ಯವಾಗಿ 120/80 MMHg ಇರಬೇಕು. ಬಿಪಿ ಪ್ರಮಾಣ ಗರಿಷ್ಠ ಪ್ರಮಾಣ 140/90 mmHg ಇದ್ದರೂ ವೈದ್ಯಕೀಯ ನಿಯಮದ ಪ್ರಕಾರ ” ಹೈಪರ್‌ ಟೆನ್ಷನ್’ ಎಂದೇ ಪರಿಗಣಿಸಬೇಕಾಗುತ್ತದೆ. 120-139/ 80-89 mmHg ಯನ್ನು ಬಾರ್ಡರ್ ಲೈನ್‌ ಎಂದೇ ಕರೆಯಲ್ಪಡುವ ಆರಂಭಿಕ ರಕ್ತದ ಒತ್ತಡ ( Free Hypertention) ಎಂದು ಪರಿಗಣಿಸುತ್ತೇವೆ. ನಿಮ್ಮ ರಕ್ತದ ಒತ್ತಡ ಪರೀಕ್ಷಿಸಿದಾಗ ಈ ಅಂಕಿ ಅಂಶ ಕಂಡು ಬಂದರೆ ಇದನ್ನು ಎಚ್ಚರಿಕೆ ಗಂಟೆ ಅಂತಲೇ ಭಾವಿಸಬೇಕು.

ಸೈಲೆಂಟ್ ಕಿಲ್ಲರ್ : ಹೈಪರ್‌ ಟೆನ್ಷನ್ ಅನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯುತ್ತೇವೆ. ಒಮ್ಮೆ ರಕ್ತದೊತ್ತಡಕ್ಕೆ ಒಳಗಾದ ವ್ಯಕ್ತಿ ಅದನ್ನು ನಿಯಂತ್ರಿಸದಿದ್ದರೆ, ಕಿಡ್ನಿ ವೈಫಲ್ಯ, ಹೃದಯಾಘಾತ, ಲಕ್ವಾದಂತಹ ಅಪಾಯಕಾರಿ ಕಾಯಿಲೆಗಳಿಗೆ ಒಳಗಾಗಿ ಜೀವ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇದನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುತ್ತದೆ.

ಹೈಪರ್‌ ಟೆನ್ಷನ್‌ಗೆ ಕಾರಣ: ಒತ್ತಡದ ಜೀವನ ಶೈಲಿ. ಅತಿಯಾದ ಮದ್ಯಪಾನ ಮತ್ತು ಧೂಮಪಾನ ಸೇವನೆ. ದೈಹಿಕ ಚಟುವಟಿಕೆ ರಹಿತ ಜೀವನ. ತಂಬಾಕು ಸೇವನೆ, ಶಿಸ್ತು ಇಲ್ಲದ ಊಟದ ಶೈಲಿಯಿಂದ ಸಾಮಾನ್ಯವಾಗಿ ಹೈಪರ್‌ ಟೆನ್ಷನ್ ಗೆ ಮೂಲ ಕಾರಣಗಳು.

ನಿಯಂತ್ರಣ ಕ್ರಮ: ಪ್ರತಿ ನಿತ್ಯವೂ ಶಿಸ್ತು ಬದ್ಧ ಆಹಾರ ಸೇವನೆ. ಅತಿಯಾದ ಸಕ್ಕರೆ ಮತ್ತು ತಂಪು ಪಾನೀಯಗಳಿಂದ ದೂರ ಇರುವುದು. ದಿನ ನಿತ್ಯ ದೈಹಿಕ ಚಟುವಟಿಕೆ ಮಾಡುವುದು. ಅತಿಯಾದ ಉಪ್ಪು ಮಿಶ್ರಿತ ಊಟದಿಂದ ದೂರ ಇರುವುದು. ತಂಬಾಕು, ಮದ್ಯಪಾನ ಮತ್ತ ಧೂಮಪಾನ ತ್ಯಜಿಸುವುದು. ಒತ್ತಡ ಬದುಕಿನಿಂದ ಮುಕ್ತಿ. ನಿರಂತರವಾಗಿ ಬಿಪಿ ತಪಾಸಣೆಗೆ ಒಳಪಡಿಸುವುದರಿಂದ ಹೈಪರ್‌ ಟೆನ್ಷನ್‌ನಿಂದ ದೂರ ಉಳಿಯಬಹುದು.

Megha
the authorMegha

Leave a Reply

error: Content is protected !!