ಕೆ.ಆರ್.ಪೇಟೆ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಯೋಗಗುರು ಅಲ್ಲಮಪ್ರಭು ನೇತೃತ್ವದಲ್ಲಿ ನ್ಯಾಯಾಧೀಶರು ಹಾಗೂ ವಕೀಲರು ಯೋಗ ಪ್ರದರ್ಶನ ಮಾಡಿ ಯೋಗದ ಮಹತ್ವವನ್ನು ಜಗತ್ತಿಗೆ ಸಾರಿದರು.
ಇಂದು ಮುಂಜಾನೆ ಆರರಿಂದ ಏಳು ಗಂಟೆಯವರೆಗೆ ಸಾಮೂಹಿಕ ಯೋಗ ಪ್ರದರ್ಶನ ಮಾಡಿದ ವಕೀಲರು ಮತ್ತು ನ್ಯಾಯಾಧೀಶರು ಯೋಗ ಮಾರ್ಗದರ್ಶನ ನೀಡಿದ ಅಂತಾರಾಷ್ಟ್ರೀಯ ಯೋಗ ಪಟು ಅಲ್ಲಮಪ್ರಭು ಅವರನ್ನು ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಗೌರವಿಸಿ ಅಭಿನಂದಿಸಿದರು.
ಆರೋಗ್ಯವಂತ ಜೀವನಕ್ಕೆ ಯೋಗವು ಸಂಜೀವಿನಿಯಾಗಿದೆ ಆದ್ದರಿಂದ ಯುವ ಜನರು ವ್ಯರ್ಥವಾಗಿ ಕಾಲಹರಣ ಮಾಡದೇ ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು ಯೋಗದಿಂದ ಸದೃಢ ಆರೋಗ್ಯವನ್ನು ರೂಢಿಸಿಕೊಳ್ಳಬೇಕು ಎಂದು ನ್ಯಾಯಾಧಿಶರಾದ ಶಕುಂತಲಾ ಮನವಿ ಮಾಡಿದರು.
ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಮಾತನಾಡಿ, ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಹಿರಿಯರ ನಾಣ್ನುಡಿಯಂತೆ ಯೋಗ ಮತ್ತು ಧ್ಯಾನ ಮಾಡುವುದರಿಂದ ಸದೃಢ ಆರೋಗ್ಯವಂತ ಜೀವನ ನಡೆಸಬಹುದು ಎಂಬ ಸತ್ಯವನ್ನು ಅರಿತು ಪ್ರತಿದಿನವೂ ಯೋಗ ಮಾಡಿ ರೋಗ ರುಜಿನಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ವಕೀಲರ ಸಂಘದ ಕಾರ್ಯದರ್ಶಿ ಆರ್.ಕೆ. ರಾಜೇಗೌಡ ಮಾತನಾಡಿ, ವಿಶ್ವಕ್ಕೆ ಯೋಗ ಮತ್ತು ಆಯುರ್ವೇದದ ಮಹತ್ವವನ್ನು ಸಾರಿದ ಭಾರತ ದೇಶವು ವಿಶ್ವದ ಪ್ರಮುಖ ಯೋಗ ರಾಷ್ಟ್ರವಾಗಿ ಹೊರಹೊಮ್ಮುವ ಮೂಲಕ ಇತಿಹಾಸ ನಿರ್ಮಿಸಿದೆ. ರೋಗಗಳಿಂದ ಮುಕ್ತವಾಗಿ ಸದೃಢವಾದ ಆರೋಗ್ಯವಂತ ಜೀವನ ನಡೆಸಲು ಯೋಗವು ದಾರಿ ಮಾರ್ಗ ವಾಗಿರುವುದರಿಂದ ಪ್ರತಿದಿನವೂ ಯೋಗಾಭ್ಯಾಸ ಮಾಡಿ ಆರೋಗ್ಯವಂತರಾಗಿ ಸ್ವಾಭಿಮಾನಿ ಬದುಕು ನಡೆಸಬೇಕು ಎಂದು ಹೇಳಿದರು.
ವಕೀಲರ ಸಂಘದ ಉಪಾಧ್ಯಕ್ಷ ಬಿ.ಸಿ.ದಿನೇಶ್ ಯೋಗದ ಮಹತ್ವ ಸಾರುವ ಸ್ವರಚಿತ ಕವನ ವಾಚನ ಮಾಡಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಬಂಡಿಹೊಳೆ ಗಣೇಶ್, ಎಂ. ಆರ್.ಪ್ರಸನ್ನಕುಮಾರ್ ಮಾತನಾಡಿದರು.
ವರದಿ.ಡಾ.ಕೆ.ಆರ್.ನೀಲಕಂಠ , ಕೃಷ್ಣರಾಜಪೇಟೆ