ನಾಗಮಂಗಲ: ಯುವಜನರು ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಜೀವಿಸಬೇಕು ಎಂದು ಡಾ. ಗೋವಿಂದರಾಯ ಸಲಹೆ ನೀಡಿದರು.
ಇಂದು ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ಚೌದರಿ ಕೊಪ್ಪಲು ಗ್ರಾಮದಲ್ಲಿ ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಡಾ.ಶ್ರೀನಿವಾಸ್ಯ ಚಾರಿಟೇಬಲ್ ಟ್ರಸ್ಟ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗಾಂಧಿ ಭವನ ಬೆಂಗಳೂರು ಹಾಗೂ ಚೌದ್ರಿ ಗ್ರಾಮ ಅಭಿವೃದ್ಧಿ ಟ್ರಸ್ಟ್ ಅವರ ಆಶ್ರಯದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಜನತೆ ಮತ್ತು ಜೀವನ ಮೌಲ್ಯ ಎಂಬ ವಿಷಯದ ಕುರಿತು ಮಾತನಾಡುತ್ತಾ, ಯುವ ಜನತೆ ಸಾಮಾಜಿಕ ಮೌಲ್ಯಗಳನ್ನು ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರದ ಉನ್ನತೀಕರಣದ ಹಾದಿಯಲ್ಲಿ ಸಾಗಬೇಕು ಹಾಗೂ ಪ್ರಪಂಚವು ವಿಜ್ಞಾನ ತಂತ್ರಜ್ಞಾನ ಸೇರಿ ಮುಂತಾದ ಕ್ಷೇತ್ರಗಳಲ್ಲಿ ವಿಸ್ತಾರ ಹೊಂದುತ್ತಿದೆ. ಆದರೆ ಮಾನವರ ಮನಸ್ಸುಗಳು ಸಂಕುಚಿತಗೊಂಡು ಕುಟುಂಬಗಳು ಸಂಕುಚಿತಗೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವವು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವಾಗ ನಾವು ಪ್ರಜಾಪ್ರಭುತ್ವದ ನಂಬಿಕೆ ಇಟ್ಟುಕೊಂಡು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ, ಸಮಾಜದ ಅಭಿವೃದ್ಧಿಯ ಕೆಲಸದಲ್ಲಿ ಭಾಗಿಯಾಗುವ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪ್ರಜಾಪ್ರಭುತ್ವದ ಭದ್ರಬುನಾದಿಗಳು. ಪ್ರಸ್ತುತ ಸಮಾಜದಲ್ಲಿ ಮೌಲ್ಯಗಳು ಕುಸಿತಗೊಳ್ಳುತ್ತಿದೆ. ಸಮಾಜವು ಮೌಲ್ಯರಹಿತವಾಗಿ ಮುಂದುವರಿಯುತ್ತಿರುವಾಗ ಅವರು ಅಳವಡಿಸಿಕೊಂಡಿರುವ ಮೌಲ್ಯ, ಮಾನವೀಯತೆ ಮೌಲ್ಯಗಳನ್ನು ಯುವಜನರು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆ ಇದೆ ಎಂದು ತಿಳಿಸಿದರು.
ಯುವಜನರು ಕಾನೂನಿನ ಚೌಕಟ್ಟಿನಲ್ಲಿ ಸ್ವಂತ ಪ್ರಯತ್ನದಲ್ಲಿ ಹಣ ಸಂಪಾನೆ ಮಾಡಿ, ಸಂತೋಷವಾಗಿ ಖರ್ಚುಮಾಡಿ ಉತ್ತಮವಾದ ಜೀವನ ನಡೆಯಿರಿ ಎಂದು ಕರೆ ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಭಾಷೆ ವಿಭಾಗದ ಮುಖ್ಯಸ್ಥರಾದ ಪ್ರೊ.ಎಚ್.ಹೊಂಬಾಳಮ್ಮ ವಹಿಸಿದ್ದರು. ಕೆ.ಜಿ. ಶ್ರೀನಿವಾಸ್, ಬೆಂಗಳೂರು ಗಾಂಧಿ ಭವನದ ನಿರ್ದೇಶಕ ಜಿ.ಬಿ. ಶಿವರಾಜು, ಶಿಬಿರದ ನಿರ್ದೇಶಕರಾದ ಡಾ.ಎಚ್.ಎಸ್. ರವೀಂದ್ರ ಮತ್ತಿತರರು ಉಪಸ್ಥಿತರಾಗಿದ್ದರು.
ವರದಿ: ಡಿ.ಆರ್. ಜಗದೀಶ್ ನಾಗಮಂಗಲ