ಬಳ್ಳಾರಿ: ಇನ್ನು ಮುಂದೆ ಗ್ರಾಮಗಳಲ್ಲಿ ರಾತ್ರಿ ತಂಗುವ (ನೈಟ್ ಹಾಲ್ಟ್) ಸಾರಿಗೆ ಬಸ್‌ಗಳ ಚಾಲಕ ಮತ್ತು ನಿರ್ವಾಹಕರಿಗೆ ಶೌಚಾಲಯ ಮತ್ತು ಸ್ನಾನಗೃಹ ವ್ಯವಸ್ಥೆ ಕಲ್ಪಿಸುವ ಹೊಣೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲಿದೆ.
ಸಾರಿಗೆ ಬಸ್‌ಗಳು ರಾತ್ರಿ ಗ್ರಾಮೀಣ ಭಾಗಕ್ಕೆ ತೆರಳಿ ಅಲ್ಲೇ ವಾಸ್ತವ್ಯ ಮಾಡುತ್ತಿರುವ ಸಾರಿಗೆ ಸಿಬ್ಬಂದಿಯ ಬಹುಕಾಲದ ತಾಪತ್ರಯಕ್ಕೆ ಇದರೊಂದಿಗೆ ಮೋಕ್ಷ ದೊರೆಯಲಿದೆ.
ಬಳ್ಳಾರಿ ಜಿಲ್ಲಾದ್ಯಂತ ಬಳ್ಳಾರಿ ಮತ್ತು ಹೊಸಪೇಟೆ ವಿಭಾಗದ ನೂರಾರು ಸಾರಿಗೆ ಬಸ್‌ಗಳು ಹಲವು ಗ್ರಾಮಗಳ ಜನರಿಗೆ ಸಾರಿಗೆ ಸೌಲಭ್ಯ ಕಲ್ಪಸುತ್ತಿರುವ ಹಿನ್ನೆಯಲ್ಲಿ ರಾತ್ರಿ ವೇಳೆ ಗ್ರಾಮದಲ್ಲಿಯೇ ತಂಗುತ್ತಿವೆ. ಅಲ್ಲದೆ ಈ ವೇಳೆ ಸಾರಿಗೆ ಸಿಬ್ಬಂದಿ, ಬಯಲಿನಲ್ಲೇ ಮಲಗಬೇಕು, ಬಹಿರ್ದೆಸೆಗೂ ಕೂಡ ಬಯಲಲ್ಲೇ ಹೋಗಬೇಕು. ಇನ್ನು ಸ್ನಾನವನ್ನೂ ಬಯಲಿನಲ್ಲಿಯೇ ಮಾಡಬೇಕು.
ಇಂತಹ ಸ್ಥಿತಿಯಿಂದಾಗಿ ನೌಕರರಿಗೆ ನಿತ್ಯ ಮುಜುಗರ ಉಂಟಾಗುತ್ತಿದೆ. ಹೀಗಾಗಿ ಈ ಮುಜುಗರವನ್ನು ತಪ್ಪಿಸಲು ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಅವರು ನೌಕರರಿಗೆ ಆಗುತ್ತಿರುವ ಅನಾನುಕೂಲತೆಯನ್ನು ಬಹಳ ಕಾಳಜಿ ವಹಿಸಿ ಸೌಲಭ್ಯ ಕಲ್ಪಿಸುವಂತೆ ಜಿಪಂ ಸಿಇಒಗೆ ಪತ್ರ ಬರೆದಿದ್ದರು. ಅದನ್ನು ಓದಿದ ಜಿಪಂ ಸಿಇಒ ಅವರು ಆ ಹೊಣೆಯನ್ನು ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ವಹಿಸಿದ್ದಾರೆ.
48 ಗ್ರಾಮಗಳಲ್ಲಿ ವಾಸ್ತವ್ಯ: ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಅವರು ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣ ಆಧಿಕಾರಿಗಳಿಗೆ ಪತ್ರ ಬರೆದು, ಅಗತ್ಯ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಗ್ರಾಮಸ್ಥರಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕೆಲವು ಗ್ರಾಮಗಳಿಗೆ ರಾತ್ರಿವೇಳೆ ತಂಗುವ ( ಹಾಲ್ಟ್ ಮಾಡುವ) ಮೂಲಕ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ರಾತ್ರಿ ವಾಸ್ತವ್ಯ ಹೂಡುವ ನಮ್ಮ ಚಾಲನಾ ಸಿಬ್ಬಂದಿಗೆ ಬೆಳಗ್ಗೆ ಸ್ನಾನ ಮಾಡುವುದಕ್ಕೆ ಸಮಸ್ಯೆಯಾಗುತ್ತಿದೆ. ಜತೆಗೆ ವಾಸ್ತವ್ಯ ಹೂಡಲೂ ಕೂಡ ವ್ಯವಸ್ಥೆಯಿಲ್ಲ, ಇದನ್ನೆಲ್ಲ ತಪ್ಪಿಸಲು 48 ಗ್ರಾಮಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಕೇಳಿದ್ದರು.
ಜಿಲ್ಲಾ ಪಂಚಾಯಿತಿ ಕ್ರಮ: ಸಾರಿಗೆಯ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪತ್ರದ ಮೂಲಕ ಸಲ್ಲಿಸಿ ಮನವಿಗೆ ಸ್ಪಂದಿಸಿರುವ ಜಿಲ್ಲಾ ಪಂಚಾಯಿತಿ ಈಗಾಗಲೇ ಬಯಲು ಶೌಚಾಲಯ ಮುಕ್ತ ಸಮಾಜ ಮಾಡಬೇಕೆಂಬ ದಿಕ್ಕಿನಲ್ಲಿ ಪ್ರಯತ್ನ ನಡೆಸುತ್ತಿದ್ದು, ಇದರೊಟ್ಟಿಗೆ ಸರಕಾರಿ ನೌಕರರೇ ಬಹಿರ್ದೆಸೆಗೆ ಬಯಲಿಗೆ ಹೋಗುತ್ತಿರುವುದನ್ನು ಕೂಡ ತಪ್ಪಿಸುವ ಜವಾಬ್ದಾರಿ ನಮ್ಮ ನಮ್ಮ ಮೇಲೆ ಇದೆ ಎಂದು ಈ ಬಗ್ಗೆ ಗಮನಹರಿಸಿರುವ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಹಳ್ಳಿಗಳಲ್ಲಿ ನೈಟ್ ಹಾಲ್ಟ್ ಮಾಡುವ ಬಸ್ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆ ಒದಗಿಸಲು ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಿದ್ದು ಕೂಡಲೇ ಸೌಲಭ್ಯ ಕಲ್ಪಿಸಲು ತಿಳಿಸಿದ್ದಾರೆ.
ಜಿಪಂ ಸಿಇಒ ಆದೇಶ: ರಾತ್ರಿ ಹೊತ್ತಿನಲ್ಲಿ ಗ್ರಾಮೀಣ ಭಾಗದಲ್ಲಿ ತಂಗುವ ಸಾರಿಗೆ ಬಸ್‌ಗಳ ಸಿಬ್ಬಂದಿಗೆ ಸ್ನಾನ ಗೃಹ, ಶೌಚಾಲಯ ವ್ಯವಸ್ಥೆ ಮಾಡಬೇಕು. ಈ ಸಂಬಂಧ ಈಗಾಗಲೇ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಿರುವಂತೆ ಗ್ರಾಪಂಗಳ ಪಿಡಿಒಗಳಿಗೆ ನೀವು ಕೂಡ ಲಿಖಿತವಾಗಿ ಮಾಹಿತಿ ರವಾನಿಸಿ ಅಗತ್ಯ ಕ್ರಮ ಕೈಗೊಂಡು ವರದಿ ನೀಡಬೇಕು. ಜತೆಗೆ ನೀವು ಈ ಬಗ್ಗೆ ನಿಗಾವಹಿಸಬೇಕು ಎಂದು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ.
ನೈಟ್ ಹಾಲ್ಟ್ ಮಾಡುವ ನಮ್ಮ ಸಾರಿಗೆ ಸಿಬ್ಬಂದಿ ಬೆಳಗ್ಗೆ ಬಯಲಿನಲ್ಲೇ ಸ್ನಾನ ಮಾಡಿಬೇಕು. ಬಹಿರ್ದೆಸೆಗೂ ಹೋಗಬೇಕು ಈ ಎಲ್ಲ ಸಮಸ್ಯೆಳನ್ನು ಸೂಕ್ಷ್ಮವಾಗಿ ಗಮನಿ ಈ ಬಗ್ಗೆ ಸಿಇಒ ಅವರ ಗಮನಕ್ಕೆ ತಂದಿದ್ದೇವೆ. ಅವರು ತಾ.ಪಂ.ಇಒಗಳಿಗೆ ಸೂಚನೆ ನೀಡಿದ್ದರಿಂದ ನಮ್ಮ ಸಿಬ್ಬಂದಿ ಮುಜುಗರಕ್ಕೆ ಒಳಗಾಗುವುದು ತಪ್ಪಿದಂತಾಗುತ್ತಿದೆ ಅಲ್ಲದೆ ಹೆಚ್ಚು ಅನುಕೂಲವಾಗಿದೆ.
l ಚಂದ್ರಶೇಖರ್ ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗೀಯ ನಿಯಂತ್ರಾಣಧಿಕಾರಿ
ರಾತ್ರಿ ಹೊತ್ತಿನಲ್ಲಿ ಗ್ರಾಮದಲ್ಲಿ ತಂಗುದ ಸಾರಿಗೆ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರಿಗೆ ಸ್ನಾನಗೃಹ, ಶೌಚಾಲಯ ವ್ಯವಸ್ಥೆಗೆ ಸಂಬಂಧಿಸಿ ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪತ್ರ ಬರೆದಿದ್ದಾರೆ. ಹೀಗಾಗಿ ಸಾರಿಗೆ ಸಿಬ್ಬಂದಿಗೆ ಅಗತ್ಯ ವ್ಯವಸ್ಥೆ ಮಾಡಲು ಎಲ್ಲ ತಾಪಂ ಇಒಗಳಿಗೆ ಸೂಚನೆ ನೀಡಲಾಗಿದ್ದು, ಅತೀ ಶೀಘ್ರದಲ್ಲೇ ಸೌಲಭ್ಯ ಕಲ್ಪಿಸಲಾಗುವುದು.
l ಡಾ.ಕೆ.ವಿ.ರಾಜೇಂದ್ರ ಬಳ್ಳಾರಿ ಜಿಪಂ ಸಿಇಒ