NEWSನಮ್ಮಜಿಲ್ಲೆ

ಅವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚಿದರೆ ಕೇಸ್‌ : ಮಂಡ್ಯ ನಗರಸಭಾಧ್ಯಕ್ಷ ಮಂಜು ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಅವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಮಂಡ್ಯ ನಗರಸಭಾಧ್ಯಕ್ಷ ಎಚ್.ಎಸ್. ಮಂಜು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ರಸ್ತೆಗಳು ಸರ್ಕಾರದ ಆಸ್ತಿಗಳಾಗಿವೆ. ಅವುಗಳನ್ನು ಜೋಪಾನ ಮಾಡುವುದು, ಚೆನ್ನಾಗಿ ಇಟ್ಟುಕೊಳ್ಳುವ ಕೆಲಸ ಸಾರ್ವಜನಿಕರದ್ದೂ ಆಗಿದೆ. ಗುಂಡಿಗಳನ್ನು ಮುಚ್ಚುವಾಗ ಇಂಜಿನಿಯರ್‌ಗಳ ಸಲಹೆ ಪಡೆಯಬೇಕು. ವೆಟ್ ಮಿಕ್ಸ್ ಹಾಕಿ ಅದಕ್ಕೆ ರೋಲ್ ಮಾಡಿ ಆಗಿಂದಾಗ್ಗೆ ನೀರು ಹಾಕಿ ಹದ ಮಾಡಬೇಕಾಗುತ್ತದೆ.

ಆದರೆ, ಸುಖಾಸುಮ್ಮನೆ ಪುಕ್ಕಟ್ಟೆ ಪ್ರಚಾರಕ್ಕಾಗಿ ಕೆಲವರು ಗುಂಡಿಗಳಿಗೆ ವೆಟ್‌ಮಿಕ್ಸ್ ತಂದು ಸುರಿದು ಗೊಂದಲ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕವಾಗಿಯೂ ದೂರುಗಳು ಬಂದಿವೆ. ಅದನ್ನೇ ಆಧಾರವಾಗಿಟ್ಟುಕೊಂಡು ಅವರ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಬೇಕು. ಕಳೆದ ಬಾರಿ ಗುಂಡಿಗಳನ್ನು ಮುಚ್ಚಲಾಗಿತ್ತು. ಆದರೆ ದುರಾದೃಷ್ಟವಶಾತ್ ಗುಂಡಿಗಳನ್ನು ಮುಚ್ಚುವ ಕಾರ್ಯಾಚರಣೆ ನಡೆಸಿದ ಎರಡು ಮೂರು ದಿನಗಳಲ್ಲೇ ಭಾರಿ ಮಳೆ ಬಂದು ಮತ್ತೆ ಗುಂಡಿಗಳಾಗಿವೆ.

ರಸ್ತೆ ಗುಂಡಿಗಳನ್ನು ಮಚ್ಚುವುದು, ರಸ್ತೆ ದುರಸ್ತಿ, ಅಭಿವೃದ್ಧಿ ಕಾರ್ಯ ಕೈಗೊಂಡರೆ ಕನಿಷ್ಠ 30 ದಿನಗಳವರೆಗೆ ಮಳೆ ಬೀಳದಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಅದು ಮೂರ್ನಾಲ್ಕು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಈ ಅವಧಿಯೊಳಗೆ ಮಳೆ ಬಂದರೆ ಅದು ಸರಿಯಾಗಿ ರಸ್ತೆಗೆ ಹೊಂದಿಕೆಯಾಗದೆ ಮತ್ತೆ ಕಿತ್ತುಬರುತ್ತದೆ. ಇದನ್ನೇ ಕೆಲವರು ಕಳಪೆ ಕಾಮಗಾರಿ ಎಂದೂ ಸಹ ಕರೆಯುತ್ತಾರೆ. ಇದರ ಬಗ್ಗೆ ವೈಜ್ಞಾನಿಕವಾಗಿ ತಿಳಿದವರು ಯಾರೂ ಸಹ ಮಾತನಾಡುವುದಿಲ್ಲ ಎಂದು ವಿವರಿಸಿದರು.

ಸರ್ಕಾರದಿಂದ ಮಂಡ್ಯ ರಸ್ತೆ ದುರಸ್ತಿ 28 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ 1.27 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಉಳಿದಂತೆ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡು ಮಂಗಳವಾರ ಅಥವಾ ಬುಧವಾರದೊಳಗೆ ಎಲ್ಲ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಇನ್ನು 15ನೇ ಹಣಕಾಸು ಯೋಜನೆಯಡಿ 5 ಕೋಟಿ ಅನುದಾನ ಲಭ್ಯವಿದೆ. ಈ ಪೈಕಿ 3 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳು ಪ್ರಾರಂಭವಾಗಿವೆ. 2 ಕೋಟಿ ರೂ. ವೆಚ್ಚದ ಕಾಮಗಾರಿಗಳು ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿವೆ ಎಂದರು.

ಸರ್ಕಾರದಿಂದ ಬಂದಿರುವ ಹಣ ಹಾಗೂ ನಮ್ಮಲ್ಲಿರುವ ಲಭ್ಯ ಅನುದಾನದಲ್ಲಿ ಎರಡು ತಿಂಗಳೊಳಗೆ ಮಂಡ್ಯ ನಗರದ ಎಲ್ಲ ರಸ್ತೆಗಳನ್ನೂ ಸಹ ಸಂಪೂರ್ಣವಾಗಿ ದುರಸ್ತಿ ಮಾಡಲಾಗುವುದು. ಆದರೆ ಮಳೆ ಬಂದರೆ ಕಾಮಗಾರಿಗೆ ಅಡ್ಡಿಯಾಗುತ್ತದೆ. ಇಲ್ಲದಿದ್ದರೆ ಯಾವುದೇ ಸಮಸ್ಯೆಯೂ ಇಲ್ಲದೆ ಸಮರ್ಪಕವಾಗಿ ಕೆಲಸ ಪೂರ್ಣವಾಗಿ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿರುತ್ತವೆ. ಆದರೆ ಯಾರೂ ಕೂಡ ಅವೈಜ್ಞಾನಿಕವಾಗಿ ಗುಂಡಿ ಮುಚ್ಚುವ ಕ್ರಮ ಅನುಸರಿಸಬಾರದು ಎಂದರು.

ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಅದರಿಂದ ಸಣ್ಣ ಪುಟ್ಟ ಅಪಘಾತಗಳು ನಡೆದಿವೆ. ಅದನ್ನೇ ಗುರಿಯಾಗಿಟ್ಟುಕೊಂಡ ಕೆಲವರು ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ದೂರಿದರು.

ಇನ್ನು ರಸ್ತೆ ಗುಂಡಿಗಳಿಗೆ ವೆಟ್‌ಮಿಕ್ಸ್ ಹಾಕಿರುವುದರಿಂದಾಗಿ ರಸ್ತೆಯಲ್ಲಿ ವಾಹನಗಳು ಚಲಿಸಿದಾಗ ಧೂಳು ಬರುತ್ತದೆ. ಜತೆಗೆ ವಾಹನಗಳ ಓಡಾಟದಿಂದಾಗಿ ಕಲ್ಲುಗಳು ಮೇಲೆದ್ದಿವೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗಳನ್ನು ಮಾಡಿಕೊಂಡಿರುವ ಉದಾಹರಣೆಗಳು ಇವೆ. ಹೀಗಾಗಿ ಇಂಥ ಕೆಲಸಕ್ಕೆ ಯಾರು ಕೈ ಹಾಕಬಾರದು ಎಂದು ಹೇಳಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ