ಬೆಂಗಳೂರು: ಕಬ್ಬು ಎಫ್ಆರ್ಪಿ ದರ ರೈತರಿಗೆ ಮೋಸ, ರಾಜ್ಯ ಸಲಹಾ ಬೆಲೆ ನಿಗದಿ ಮಾಡಿ ಕಬ್ಬಿನಿಂದ ಬರುವ ಇತರೆ ಉತ್ಪನ್ನಗಳ ಲಾಭ ಹಂಚಿಕೆ ಮಾಡಿ ಎಂದರೆ ಪೊಲೀಸರು ಮುಖ್ಯಮಂತ್ರಿ ಮನೆ ಬಳಿ ಹೋಗಲು ಬಿಡುತ್ತಿಲ್ಲ, ನಮ್ಮನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ನಿಲ್ಲಿಸಿ ಎಂದು ಘೋಷಣೆ ಕೂಗುತ್ತಾ ಸಿಎಂ ಮನೆ ಕಡೆ ಹೊರಟ ರೈತರನ್ನು ರೈತ ಮಹಿಳೆಯರನ್ನು ಪೊಲೀಸರು ಬಂಧಿಸಿದರು.
ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ನಲ್ಲಿ ರೈತರು ನಡೆಸುತ್ತಿರುವ ಆಹೋ ರಾತ್ರಿ ಧರಣಿ ಶುಕ್ರವಾರದಕ್ಕೆ 11ನೇ ದಿನಕ್ಕೆ ಕಾಲಿಟ್ಟುದ್ದು, ಈ ವೇಳೆ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ಸುಮ್ಮಸುಮ್ಮನೆ ಮುಂಜಾಗ್ರತ ಕ್ರಮ ಬಂಧನ ಬೇಡ, ನ್ಯಾಯ ಕೊಡಿಸಿ ಇಲ್ಲವೇ ನ್ಯಾಯಾಧೀಶರ ಮುಂದೆ ನಿಲ್ಲಿಸಿ, ನಿಮಗೆ ಸಾಧ್ಯವಾದರೆ ಮಾತ್ರ ನಮ್ಮನ್ನು ಬಂಧಿಸಿ ಎಂದು ಎಸಿಪಿಗೆ ಎಚ್ಚರಿಕೆ ನೀಡಿದರು.
ನಾವು ಮುಖ್ಯಮಂತ್ರಿ ಮನೆಗೆ ಹೋಗಲು ಬಿಡುತ್ತಿಲ್ಲ, ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯುತ್ತಿಲ್ಲ, ಇದು ಗೂಂಡಾಗಿರಿ ವರ್ತನೆ, ಎನ್ನುತ್ತಾ ಆಕ್ರೋಶಗೊಂಡ ರೈತಮುಖಂಡ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮತ್ತು ರೈತ ಮಹಿಳೆಯರನ್ನು ಮುಖ್ಯಮಂತ್ರಿ ಮನೆಯತ್ತ ಹೋಗಲು ಯತ್ನಿಸಿದಾಗ ಬಂಧಿಸಲಾಯಿತು.
ರಾಜ್ಯ ಸರ್ಕಾರ ಜೇಡರ ಬಲೆಯಲ್ಲಿ ಸಿಲುಕಿದೆ. ರೈತರನ್ನು ಈ ಸುಳಿಯಲ್ಲಿ ಸಿಲುಕಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಮಂಡ್ಯ, ಬಿಜಾಪುರ, ಮೈಸೂರು ಜಿಲ್ಲೆಗಳಲ್ಲಿ ನಿರಂತರ ಧರಣಿ ಚಳವಳಿ ನಡೆಸುತ್ತಿದ್ದರು, ಮಂತ್ರಿಗಳು ಸುಳ್ಳು ಹೇಳಿಕೊಂಡು ರಾಜಭಾರ ಮಾಡುತ್ತಿದ್ದಾರೆ. ಸಕ್ಕರೆ ಸಚಿವರು ಪಾಪದ ಕೂಸಾಗಿ ಕೆಲಸ ಮಾಡುತ್ತಿದ್ದಾರೆ, ರಾಜ್ಯದ ರೈತರು ಬಿಜೆಪಿ ಶಾಸಕರು ಸಂಸದರ ಮನೆ ಅಥವಾ ಕಚೇರಿ ಮುಂದೆ ರಾಜ್ಯಾದ್ಯಂತ ಡಿಸೆಂಬರ್ ಐದರಂದು ಪ್ರತಿಭಟನೆ ಮಾಡಿ ಎಚ್ಚರಿಸಬೇಕು ಎಂದು ರೈತರಿಗೆ ಕರೆ ನೀಡಿದರು.
ಕಬ್ಬು ಹೆಚ್ಚುವರಿ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರ ನಾಲ್ಕಾರು ಸಭೆಗಳನ್ನು ನಡೆಸಿ, ತಜ್ಞರ ಸಮಿತಿ ರಚಿಸಿ ಐದು ದಿನದಲ್ಲಿ ಏನು ವರದಿ ಮಾಡಿದ್ದಾರೆ ಎಂಬುದನ್ನು ರೈತರ ಮುಂದೆ ಬಹಿರಂಗಪಡಿಸಲಿ. ರೈತರಿಗೆ ನ್ಯಾಯ ನೀಡುವುದಾಗಿ ಭರವಸೆ ನೀಡಿ ಹುಸಿಗೊಳಿಸುತ್ತಿದ್ದಾರೆ. ರೈತರ ಬದುಕು ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಎನ್ನುವಂತಾಗಿದೆ ಎಂದು ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಿದ್ದರು ಸರ್ಕಾರ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳದೆ, ಪೂಲೀಸರ ಬಲದಿಂದ ಭಂಡತನ ತೂರುತಿದೆ. ಮುಖ್ಯಮಂತ್ರಿಯವರು ಜನಸಂಪರ್ಕ ಸಭೆ ಮಾಡುತ್ತಿದ್ದಾರೆ ಯಾವ ಸಾಧನೆಗಾಗಿ ಎಂದು ಪ್ರಶ್ನಿಸಿದ ಅವರು ನಿಮ್ಮ ಕಚೇರಿ ಹತ್ರ ಕುಳಿತಿರುವ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ವಿಫಲರಾಗಿದ್ದೀರಿ. ಇನ್ನು ನಿಮ್ಮಿಂದ ಮುಂದೆ ಏನು ಮಾಡಲು ಸಾಧ್ಯವಿಲ್ಲ ಎಂಬುವುದು ರೈತರಿಗೆ ಗೊತ್ತಿದೆ ಎಂದು ಕಿಡಿಕಾರಿದರು.
ಕಬ್ಬು ಬೆಳೆಗಾರರ ರೈತ ಮುಖಂಡರ ಗುಂಪೊಂದು ಮುಖ್ಯಮಂತ್ರಿ ಗೃಹ ಕಚೇರಿಯ ಮುಂದೆ ಹೋದರೆ ಭೇಟಿಗೂ ಅವಕಾಶ ನೀಡಲಿಲ್ಲ ಎಂದು ಪ್ರತಿಭಟಿಸಿದಾಗ ಇದನ್ನು ಕಂಡು ಕಕ್ಕಾಬಿಕ್ಕಿಯಾದ ಪೊಲೀಸರು ಬಂಧಿಸಿ ಕರೆದೋಯ್ದರು. ದೂರದ ಜಿಲ್ಲೆಗಳಿಂದ ಬಂದ ಕಬ್ಬು ಬೆಳೆಗಾರ ರೈತರನ್ನು ಬೆಳಗ್ಗೆ ರೈಲು ನಿಲ್ದಾಣದಲ್ಲಿ ಪೊಲೀಸರು ದಿಕ್ಕು ತಪ್ಪಿಸಿದ ಪ್ರಸಂಗವು ನಡೆಯಿತು. ಬಂಧಿಸಿದ ನಂತರ ಸಿಎಆರ್ ಮೈದಾನಕ್ಕೆ ಬಂದ ರೈತರು ಪೊಲೀಸರ ನಡೆ ಖಂಡಿಸಿದರು.
ಬಂಧಿತ ರೈತರು ಊಟ ಮಾಡದೆ ನ್ಯಾಯಾಧೀಶರ ಮುಂದೆ ನಮ್ಮನ್ನು ನಿಲ್ಲಿಸಿ ಅಥವಾ ಮುಖ್ಯಮಂತ್ರಿ ಮನೆಗೆ ಕರೆದುಕೂಂಡು ಹೋಗಿ ಎಂದು ಹಟ ತೊಟ್ಟು ಕುಳಿತಿದಾರೆ. 4 ಗಂಟೆ ಸಮಯದಲ್ಲಿ ಸರ್ಕಾರದ ಬೇಜವಾಬ್ದಾರಿ ಆಡಳಿತದಿಂದ ಕಾಡಂಚಿನಲ್ಲಿ ಪ್ರಾಣಿಗಳ ಹಾವಳಿಯಿಂದ ನಿನ್ನೆ ಚಿರತೆ ದಾಳಿಗೆ ತಿ. ನರಸೀಪುರದಲ್ಲಿ ಯುವತಿ ಒಬ್ಬಳು ಪ್ರಾಣ ಕಳೆದು ಕೊಂಡಿದ್ದಾಳೆ. ಅರಣ್ಯ ಇಲಾಖೆಯವರು ನಿದ್ರೆ ಮಾಡುತ್ತಿದ್ದಾರೆ ಎಂದೂ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಸಿಟ್ಟು ಹೊರಹಾಕಿದರು.
ಪ್ರತಿಭಟನೆಯಲ್ಲಿ ಕುರುಬೂರು ಶಾಂತಕುಮಾರ್, ವೀರನಗೌಡ ಪಾಟೀಲ್, ಕುಮಾರ್ ಬುಬಾಟಿ, ರಮೇಶ್ ಹೂಗಾರ್ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಹುಳುವಪ್ಪ ಬಳಗೆರಾ, ನಿಂಗನಗೌಡರು, ಮಂಜುಳಾ ಪಾಟೀಲ್, ದೇವಮಣ್ಣಿ, ಮುಂತಾದವರು ಇದ್ದರು.