ಮಂಗಳೂರು: ಖ್ಯಾತ ಯಕ್ಷಗಾನ ಹಾಗೂ ತಾಳ ಮದ್ದಲೆ ಕಲಾವಿದ ಕುಂಬ್ಳೆ ಸುಂದರ್ ರಾವ್ (88) ಬುಧವಾರ ಮುಂಜಾನೆ ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ವಿಧಿವಶರಾದರು.
ಮೃತರ ಅಂತ್ಯಕ್ರಿಯೆಯನ್ನು ಗುರುವಾರ ನೆರವೇರಿಸಲಾಗುವುದು ಎಂದು ಕುಂಬ್ಳೆ ಸುಂದರ್ ರಾವ್ ಅವರ ಪುತ್ರ ತಿಳಿಸಿದ್ದು, ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಅದ್ಭುತ ವಾಕ್ ಚಾತುರ್ಯದಿಂದ ಪ್ರಸಿದ್ಧವಾಗಿದ್ದ ಕುಂಬ್ಳೆ ಸುಂದರ್ ರಾವ್ ಅವರು, ಪ್ರಾಸಬದ್ಧ ಸಂಭಾಷಣೆಯಿಂದಲೆ ಹೆಸರುವಾಸಿಯಾಗಿದ್ದರು. ಯಕ್ಷಗಾನದ ತೆಂಕುತಿಟ್ಟು ಕಲಾವಿದರಾಗಿದ್ದ ಅವರು, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು.
ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ, ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018-19ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಐವತ್ತಕ್ಕೂ ಅಧಿಕ ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ್ದ ಕುಂಬ್ಳೆ ಸುಂದರ್ ರಾವ್ ಅವರ ನಿಧನಕ್ಕೆ ಮಂಗಳೂರಿನ ಯಕ್ಷ ಕಲಾರಂಗ ಸಂತಾಪ ಸೂಚಿಸಿದೆ.
ಕುಂಬ್ಳೆ ಸುಂದರ್ ರಾವ್ ಅವರು, 1994ರಿಂದ 1999ರವರೆಗೆ ಸುರತ್ಕಲ್ ಕ್ಷೇತ್ರದಿಂದ ಹತ್ತನೇ ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿದ್ದರು. ಶಾಸಕರಾಗಿಯೂ ತಮ್ಮ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದರು. ಬಳಿಕ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)