ಮದ್ದೂರು: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ತನ್ನ ಮೂರು ಮಕ್ಕಳಿಗೆ ಆಹಾರದಲ್ಲಿ ವಿಷಹಾಕಿ ಉಣಿಸಿ ಬಳಿಕ ತಾನು ನೇಣು ಬಿಗಿದುಕೊಂಡು ಮಹಿಳರ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ.
ಮದ್ದೂರಿನ ಹೊಳೆಬೀದಿಯ ನಿವಾಸಿ ಉಸ್ನಾ ಕೌಸರ್ (30) ತನ್ನ ಮೂರು ಮಕ್ಕಳಿಗೆ ಅನ್ನದಲ್ಲಿ ವಿಷಹಾಕಿ ಹತ್ಯೆ ಮಾಡಿದ ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಮಕ್ಕಳಾದ ಹಾರಿಸ್ (7), ಆಲಿಸಾ (4) ಅನಮ್ ಫಾತಿಮಾ (2) ಈ ಮೂರು ಮಕ್ಕಳು ಮೃತಪಟ್ಟಿದ್ದಾರೆ.
ಉಸ್ನಾ ಕೌಸರ್ ಗಂಡ ಅಖಿಲ್ ಅಹಮದ್ ಅಕ್ರಮ ಸಂಬಂಧಕ್ಕೆ ಬೇಸತ್ತು ಕೌಸರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಚನ್ನಪಟ್ಟಣದಲ್ಲಿ ಕಾರ್ ಮೆಕಾನಿಕ್ ಆಗಿರುವ ಅಖಿಲ್ ಅಹಮದ್ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಅದಕ್ಕೆ ಪೂರಕ ಎಂಬಂತೆ ಅಖಿಲ್ ಮೊಬೈಲ್ನಲ್ಲಿ ಕೌಸರ್ಗೆ ಪರ ಸ್ತ್ರೀಯ ಬೆತ್ತಲೆ ಫೋಟೋ ಹಾಗೂ ಆಕೆಯ ಜತೆ ಅಖಿಲ್ ಅಹಮದ್ ಇದ್ದ ಫೋಟೋಗಳು ಪತ್ತೆಯಾಗಿವೆ.
ಅದನ್ನು ಪ್ರಶ್ನೆ ಮಾಡಿದ್ದ ಕೌಸರ್, ಇದೇ ವಿಚಾರಕ್ಕೆ ಮನೆಯಲ್ಲಿ ಜೋರು ಗಲಾಟೆಯೂ ಸಹ ನಡೆದಿದೆ. ನಂತರ ಇಬ್ಬರನ್ನು ಪೋಷಕರು ರಾಜಿ ಮಾಡಿದ್ದು, ಅಕ್ರಮ ಸಂಬಂಧ ಬಿಡುವುದಾಗಿ ಅಖಿಲ್ ಹೇಳಿದ್ದ.
ಆದರೆ, ನಿನ್ನೆ ಉರುಫ್ ಹಿನ್ನೆಲೆ ಕೆಲಸ ಮುಗಿಸಿ ಬೇಗಾ ಮನೆಗೆ ಬರ್ತೀನಿ ಎಂದು ಹೇಳಿ ಹೋದ ಅಖಿಲ್ ಸಂಜೆಯಾದರೂ ಮನೆಗೆ ಬಾರದಿದ್ದಾಗ ಕೌಸರ್ ಫೋನ್ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಫೋನ್ನಲ್ಲಿ ಮತ್ತೆ ಜಗಳವಾಗಿದೆ. ಖಾಸಗಿ ಕ್ಲಿನಿಕ್ನಲ್ಲಿ ಕೆಲಸ ಮಾಡುತ್ತಿದ್ದ ಕೌಸರ್ ಮನೆಗೆ ಬಂದು ಅನ್ನದಲ್ಲಿ ಮಕ್ಕಳಿಗೆ ವಿಷ ಕಲಸಿ ತಿನ್ನಿಸಿ ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ನಾಲ್ವರನ್ನು ಅಖಿಲ್ ಅಹಮದ್ ಕೊಲೆ ಮಾಡಿದ್ದಾನೆ ಎಂದು ಕೌಸರ್ ಪೋಷಕರು ಆರೋಪ ಮಾಡಿದ್ದು, ವಿಷಯ ತಿಳಿಯುತ್ತಿದ್ದಂತೆ ಅಖಿಲ್ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಘಟನೆ ಸಂಬಂಧ ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://vijayapatha.in/wp-content/uploads/2024/02/QR-Code-VP-1-1-300x62.png)