ಖಮ್ಮಂ: ತನ್ನ ಬೆನ್ನಮೇಲೆ ಗಾಡಿಯನ್ನು ಹೊತ್ತು ಸಾಗಿಸುತ್ತಿದ್ದ ಎತ್ತೊಂದು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿತು ಎಂಬ ಕಾರಣಕ್ಕೆ ಅಧಿಕಾರಿಗಳು ಎತ್ತಿನ ಗಾಡಿಯ ಮಾಲೀಕನಿಗೆ ದಂಡ ವಿಧಿಸಿರುವ ವಿಚಿತ್ರ ಘಟನೆಯೊಂದು ತೆಲಂಗಾಣದ ಖಮ್ಮಂನಲ್ಲಿ ವರದಿಯಾಗಿದೆ.
ಇನ್ನು ತನ್ನ ಪಾಡಿಗೆ ತಾನು ಗಾಡಿ ಎಳೆದುಕೊಂಡು ಹೋಗುತ್ತಿದ್ದ ಎತ್ತು ರಸ್ತೆಯಲ್ಲಿ ಉಚ್ಚೆ ಮಾಡಿದೆ. ಆದರೆ, ಅದಕ್ಕೆ ಇನ್ನು ಮುಂದೆ ಬುದ್ದಿ ಕಲಿಸಿ ರಸ್ತೆಗೆ ಇಳಿಸಬೇಕು ಎಂಬ ರೀತಿ ಅಧಿಕಾರಿಗಳು ಮಾಲೀಕನಿಗೆ ದಂಡ ಹಾಕಿದ್ದಾರೆ. ಇದು ಎಷ್ಟು ಸರಿ ಎಂಬ ಚರ್ಚೆಕೂಡ ಆಗುತ್ತಿದೆ.
ಹೌದು! ಬುದ್ದಿ ಇರುವ ಸುಶಿಕ್ಷಿತರೆನಿಸಿರುವ ಮನುಷ್ಯರೇ ನಿಯಮಗಳನ್ನು ಪಾಲಿಸಲು ಸಿದ್ಧರಿಲ್ಲ. ಹೀಗಿರುವಾಗ ನಾಗರಿಕ ಶಿಷ್ಟಾಚಾರದ ಅರಿವಿಲ್ಲದ, ಮಾತು ಬಾರದ ಮೂಕ ಪ್ರಾಣಿಗಳಿಗೆ ಸರ್ಕಾರಿ ನಿಯಮದ ಅರಿವು ಹೇಗಿರಲು ಸಾಧ್ಯ. ಹೀಗಿರುವಾಗ ಈ ರೀತಿ ದಂಡ ವಿಧಿಸಿದ್ದು, ಎಷ್ಟು ಸರಿ ಎಂದು ಅನೇಕರು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎತ್ತುಗಳ ಮಾಲೀಕರಾದ ಸುಂದರ್ಲಾಲ್ ಲೋಧ್ (Sundarlal Loadh) ಎಂಬುವರು, ಹೂವಿನ ಕುಂದಗಳನ್ನು ಹಾಗೂ ಮಣ್ಣುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಎತ್ತಿನ ಗಾಡಿಯ ಮೂಲಕ ಸಾಗಿಸುತ್ತಿದ್ದರು. ಜೀವನೋಪಾಯಕ್ಕಾಗಿ ಈ ಕೆಲಸ ಮಾಡುತ್ತಿದ್ದ ಲೋಧ್ ಅವರ ಎತ್ತುಗಳು ಖಮ್ಮಂನ ಸಿಂಗರೇಣಿ ಕಾಲೀರೀಸ್ ಕಂಪನಿ ಲಿಮಿಟೆಡ್ (ಎಸ್ಸಿಸಿಎಲ್) ಪ್ರಧಾನ ವ್ಯವಸ್ಥಾಪಕರ ಕಚೇರಿ ಎದುರು ಮೂತ್ರ ವಿಸರ್ಜನೆ ಮಾಡಿದ್ದವು ಎಂದು ತಿಳಿದು ಬಂದಿದೆ.
ಈ ಬಗ್ಗೆ ಸಿಂಗರೇಣಿ ಕಾಲೀರೀಸ್ ಕಂಪನಿ ಲಿಮಿಟೆಡ್ ಕೊತ್ತಪೂಸಪಲ್ಲಿ ಹಾಗೂ ಪತ್ತಪೂಸಪಲ್ಲಿ ಮಾರ್ಗ ಮಧ್ಯೆ ಇದ್ದು, ಅಲ್ಲಿಗೆ ತಲುಪಿದ ಸಂದರ್ಭದಲ್ಲಿ ಎತ್ತುಗಳು ಮೂತ್ರ ವಿಸರ್ಜನೆ ಮಾಡಿವೆ. ಅದನ್ನು ಗಮನಿಸಿ ಕಂಪನಿ ಲಿಮಿಟೆಡ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 290 (ಸಾರ್ವಜನಿಕರಿಗೆ ತೊಂದರೆ) ಅಡಿ ಲೋಧ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಲ್ಲದೇ ಅವರನ್ನು ಯೆಲ್ಲಾಂಡು ಪ್ರದೇಶದಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನವಂಬರ್ 29 ರಂದು ಈ ಘಟನೆ ನಡೆದಿದೆ. ಅಂದು ಈತನಿಗೆ 100 ರೂಪಾಯಿ ದಂಡ ವಿಧಿಸುವಂತೆ ನೋಟಿಸ್ ಬಂದಿತ್ತು. ಆದರೆ ಅವರ ಬಳಿ ಹಣವಿರಲಿಲ್ಲ. ಅಂದು ನನ್ನ ಬಳಿ ಹಣವಿರಲಿಲ್ಲ ಹಾಗೂ ಕರ್ತವ್ಯದಲ್ಲಿದ್ದ ಪೇದೆಯೊಬ್ಬರಿಗೆ ಮನವಿ ಮಾಡಿ ಹಣ ಇರುವಾಗ ವಾಪಸ್ ಕೊಡುವೆ ಈಗ ನನ್ನ ಬಳಿ ಹಣವಿಲ್ಲ ಎಂದು ಮನವಿ ಮಾಡಿದಾಗ ಅವರು ಆ 100 ರೂಪಾಯಿ ದಂಡವನ್ನು ಪಾವತಿ ಮಾಡಿದರು ಎಂದು ಸುಂದರ್ಲಾಲ್ ಲೋಧ್ ಹೇಳಿಕೊಂಡಿದ್ದಾರೆ.
ಆ ಕಚೇರಿಯ ಮುಂದೆ ನಮ್ಮ ಎತ್ತುಗಳು ಮೂತ್ರ ಮಾಡುತ್ತವೆ ಎಂಬ ನಿರೀಕ್ಷೆ ನನಗಿರಲಿಲ್ಲ. ಈ ಎತ್ತಿನಗಾಡಿಯೇ ನನ್ನ ಜೀವನದ ಮೂಲಾಧಾರವಾಗಿದೆ. ನಮ್ಮ ಕುಟುಂಬ ನಾಲ್ಕು ತಲೆಮಾರಿನಿಂದ ಕೃಷಿಯಲ್ಲಿ ತೊಡಗಿತ್ತು. ಆದರೆ ಖಮ್ಮಂ ಜಿಲ್ಲೆಯ ಕಾರೇಪಲ್ಲಿ ಮಂಡಲದ ಉಸಿರಿಕಾಯಲಪಲ್ಲಿಯಲ್ಲಿರುವ ನನ್ನ ಜಮೀನನ್ನು ಸಿಂಗರೇಣಿ ಕಾಲೀರೀಸ್ ಕಂಪನಿ ಲಿಮಿಟೆಡ್ಗೆ ನೀಡಲಾಗಿದೆ. ಆದರೆ ಸೂಕ್ತ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಈಗ ಎತ್ತಿನ ಗಾಡಿಯೇ ನನ್ನ ಆದಾಯದ ಮೂಲವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ನಮ್ಮ ಈ ಆಸ್ತಿ ಪರಿಹಾರದ ವಿಚಾರವಾಗಿ ನಾವು ಕೋರ್ಟ್ಗೆ ಅಲೆದಾಡಿದ್ದೆವು. ಆದಾಗ್ಯೂ ಅವರು ನಮ್ಮ ಜಮೀನಿಗೆ ತಕ್ಕ ಬೆಲೆ ನೀಡಲಿಲ್ಲ ಎಂದು ಸುಂದರ್ಲಾಲ್ ಲೋಧ್ ಹೇಳಿದ್ದಾರೆ. ಇತ್ತ ಮೂಕ ಪ್ರಾಣಿಗಳ ವಿರುದ್ಧ ಇವರು ದಂಡ ವಿಧಿಸಿದ್ದಾರೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವ ಜನರ ವಿರುದ್ಧ ಇವರು ಕ್ರಮ ಕೈಗೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಅದೇನೆ ಇರಲಿ ಒಬ್ಬ ಗಾಡಿ ಮಾಲೀಕನ ಎತ್ತು ಮೂತ್ರ ಮಾಡಿತು ಎಂಬ ಕಾರಣಕ್ಕೆ ದಂಡ ವಿಧಿಸಲಾಗಿದೆ. ಆದರೆ ರಸ್ತೆಯಲ್ಲಿ ತಿರುಗಾಡುವ ಬೀಡಾಡಿ ದನಗಳು ಮಾಡಿಕೊಳ್ಳುವ ಮೂರ್ತ ವಿರ್ಸಜನೆಯ ದಂಡವನ್ನು ಯಾರಿಗೆ ವಿಧಿಸುತ್ತಾರೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.