ಬೆಂಗಳೂರು ಗ್ರಾಮಾಂತರ: ಗ್ರಾಮೀಣ ಪ್ರದೇಶಗಳ ಜನರ ಅಹವಾಲುಗಳ ತ್ವರಿತ ಸ್ಪಂದನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ದೊರೆತ ಸೌಲಭ್ಯಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ವರದಾನವಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ಕಂಟನಕುಂಟೆ ಗ್ರಾಪಂ ವ್ಯಾಪ್ತಿಯ ವಡ್ಡರಹಳ್ಳಿಯಲ್ಲಿ ಇಂದು ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಸರ್ಕಾರ ಗ್ರಾಮೀಣ ಪ್ರದೇಶದ ಜನರ ಅಹವಾಲುಗಳಿಗೆ ಸ್ಪಂದಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಒಂದು ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳನ್ನು ಆಯ್ದುಕೊಂಡು ಅಲ್ಲಿನ ಸಾರ್ವಜನಿಕರ ಅಹವಾಲುಗಳನ್ನು ಗುರುತಿಸಿ, ತ್ವರಿತ ಪರಿಹಾರ ಒದಗಿಸುವ ಕಾರ್ಯಗಳು ಈ ಕಾರ್ಯಕ್ರಮದಿಂದ ಸಾಧ್ಯವಾಗುತ್ತಿವೆ ಎಂದರು.
![](https://vijayapatha.in/wp-content/uploads/2022/11/19-Nov-BGR-DC-LATHA-1-1-300x164.jpg)
ಇಂದಿನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯಿಂದ ನೂರಕ್ಕೂ ಅಧಿಕ ಪಿಂಚಣಿ ಮಂಜೂರಿ ಆದೇಶ, ಪೌತಿ ಖಾತೆ ಆದೇಶ, ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದವರಿಗೆ 94 ಸಿ ಹಾಗೂ 94 ಸಿಸಿ ಅಡಿ ಸುಮಾರು 115 ಜನರಿಗೆ ಹಕ್ಕು ಪತ್ರ. ಪಹಣಿ ತಿದ್ದುಪಡಿ ಪತ್ರಗಳನ್ನು ವಿತರಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ. ಕಂಟನಕುಂಟೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಆಯುಷ್ಮಾನ ಭಾರತ್ ಆರೋಗ್ಯ ಕರ್ನಾಟಕ ಕಾರ್ಡುಗಳನ್ನು ವಿತರಿಸಿರುವುದು ಅಭಿನಂದನೀಯ ಕಾರ್ಯವಾಗಿದೆ.
ಈ ಕಾರ್ಡಿನ ಮೂಲಕ ಸುಮಾರು 5 ಲಕ್ಷ ರೂ.ಗಳವೆರೆಗಿನ ವೈದ್ಯಕೀಯ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಕಂಟನಕುಂಟೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 6175 ವಿವಿಧ ರೀತಿಯ ಫಲಾನುಭವಿಗಳಿಗೆ ಇಂದು ಸೌಲಭ್ಯ ವಿತರಿಸಲಾಗುತ್ತಿದೆ. ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಒಂದು ತಂಡವಾಗಿ ಪ್ರತಿ ತಿಂಗಳು ಗ್ರಾಮವೊಂದಕ್ಕೆ ಬಂದು ಜನರಿಗೆ ಸ್ಪಂದಿಸುತ್ತಿರುವುದು ಸರ್ಕಾರದ ಜನಪರ ಕಾರ್ಯವಾಗಿದೆ. ಗ್ರಾಮೀಣ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಕಂದಾಯ ಮಂತ್ರಿ ಆರ್.ಅಶೋಕ ಅವರು ಈ ಹಿಂದೆ ಹೊಸಳ್ಳಿ ಗ್ರಾಮದಲ್ಲಿ ರಾಜ್ಯದ ಮೊದಲ ಕಾರ್ಯಕ್ರಮ ಆಯೋಜಿಸಿದ್ದ ಸಂದರ್ಭದಲ್ಲಿ ಭರವಸೆ ನೀಡಿದ್ದ ಕೆಲವು ಹಕ್ಕುಪತ್ರಗಳ ವಿತರಣೆಗೆ ತ್ವರಿತ ಕ್ರಮವಹಿಸಿದರೆ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತದೆ. ನಿರಂತರವಾಗಿ ನಡೆಯುವ, ದೈನಂದಿನ ಕಾರ್ಯಗಳ ಜೊತೆಗೆ ಪಹಣಿ ಪತ್ರಿಕೆ ತಿದ್ದುಪಡಿ, ಪೌತಿಖಾತೆ ಮೊದಲಾದ ಕಂದಾಯ ದಾಖಲೆಗಳ ತ್ವರಿತ ವಿತರಣೆಗೆ ಜಿಲ್ಲಾಡಳಿತ ಕ್ರಮಕೈಗೊಂಡಿರುವುದು ಸ್ವಾಗತಾರ್ಹ ಎಂದರು.
ಫಲಾನುಭವಿಗಳಿಗೆ ಸೌಲಭ್ಯ ವಿತರಣೆ: ಕಂದಾಯ ಇಲಾಖೆಯ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ವೇತನ, ಮುಖ್ಯಮಂತ್ರಿ ರೈತವಿದ್ಯಾನಿಧಿ, ಅಂತರ್ಜಾತಿ ಪ್ರೋತ್ಸಾಹ ಧನ, ಕಾರ್ಮಿಕರಿಗೆ ಕಿಟ್ಗಳು, ಮುಜರಾಯಿ ದೇವಸ್ಥಾನದ ಇ-ಖಾತೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ಗಳು, ಆರೋಗ್ಯ ಇಲಾಖೆಯಿಂದ ತಾಯಿ ಕಾರ್ಡುಗಳು,ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಗುರುತಿನ ಚೀಟಿಗಳು ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಈ ಸಂದರ್ಭದಲ್ಲಿ ಮಂಜೂರಾತಿ ಪತ್ರ,ಹಕ್ಕು ಪತ್ರ,ದಾಖಲೆಗಳನ್ನು ವಿತರಿಸಲಾಯಿತು.
ಕಂಟನಕುಂಟೆ ಗ್ರಾಪಂ ಅಧ್ಯಕ್ಷೆ ಮುಬೀನಾ ತಾಜ್, ಉಪಾಧ್ಯಕ್ಷ ನಾಗರಾಜ, ಮುಖಂಡರಾದ ವೆಂಕಟೇಶ, ಜಯಲಕ್ಷ್ಮಮ್ಮ, ಕೃಷ್ಣಮೂರ್ತಿ,ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ತೇಜಸ್ಕುಮಾರ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ, ತಹಸೀಲ್ದಾರ್ ಮೋಹನ ಕುಮಾರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ರಾಪಂ ಸದಸ್ಯರು ,ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)