-
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆ ಲೋಕಾರ್ಪಣೆ
-
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ಉದ್ಘಾಟನೆ
ಬೆಂಗಳೂರು: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದ ಶೇ.25 ರಷ್ಟು ಪಾಲು ಹೊಂದಿರುವ ಕರ್ನಾಟಕ ಹಾಗೂ ಬೆಂಗಳೂರು ಅಭಿವೃದ್ಧಿಯ ಮುಂಚೂಣಿ ಪಥದಲ್ಲಿದೆ. ನಾಡಪ್ರಭು ಕೆಂಪೇಗೌಡರ ಕಲ್ಪನೆಯ ಬೆಂಗಳೂರಿನ ಸಮಗ್ರ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಟರ್ಮಿನಲ್ 2 ಹಾಗೂ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಭವ್ಯ ಪ್ರಗತಿ ಪ್ರತಿಮೆ ಲೋಕಾರ್ಪಣೆ ನಂತರ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.
ವಾಣಿಜ್ಯ, ಸಂಸ್ಕೃತಿ, ಪರಂಪರೆ, ಆಡಳಿತದ ಸಮರ್ಪಕ ಸಂಯೋಜನೆಯಿಂದ ಕೆಂಪೇಗೌಡರು ನಗರ ನಿರ್ಮಾಣಕ್ಕೆ ಬುನಾದಿ ಹಾಕಿದರು.ಇಂದು ಆಡಳಿತ,ವ್ಯಾಪಾರದ ರೂಪುರೇಷೆ ಬದಲಾದರೂ ಕೂಡ ಬೆಂಗಳೂರಿನ ಆರ್ಥಿಕತೆ ನಿರಂತರವಾಗಿ ಅಭಿವೃದ್ಧಿಯಾಗುತ್ತಲೇ ಸಾಗಿದೆ. ಭಾರತದ ಮೊದಲ ಮೇಕ್ ಇನ್ ಇಂಡಿಯಾ ವಂದೇ ಭಾರತ ರೈಲು ಕರ್ನಾಟಕದಿಂದ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ.
![](https://vijayapatha.in/wp-content/uploads/2022/11/11-Nov-kia-modi-300x172.jpg)
ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್ 2 ಸಾಮಾಜಿಕ ಜಾಲತಾಣಗಳು ಹಾಗೂ ಭಾವಚಿತ್ರಗಳಲ್ಲಿ ಇರುವದಕ್ಕಿಂತಲೂ ಸುಂದರವಾಗಿದೆ. ಈ ನಾಡಿನ ಜನರ ಹಳೆಯ ಬೇಡಿಕೆ ಈಗ ಈಡೇರಿದೆ. ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆ ಲೋಕಾರ್ಪಣೆ ಮಾಡಿ, ಅವರ ಪಾದಗಳಿಗೆ ಜಲಾಭಿಷೇಕ ಮಾಡುವ ಅವಕಾಶ ದೊರೆತಿರುವುದು ತಮ್ಮ ಪಾಲಿನ ಸೌಭಾಗ್ಯವಾಗಿದೆ ಎಂದರು.
ಸ್ಟಾರ್ಟ್ ಅಪ್ಗಳ ಸ್ಫೂರ್ತಿಯ ಚಿಲುಮೆ: ಭಾರತವನ್ನು ಸಶಕ್ತಗೊಳಿಸಲು ಸ್ಟಾರ್ಟ್ ಅಪ್ಗಳು ರಹದಾರಿಯಾಗಿವೆ. ಬೆಂಗಳೂರು ಸ್ಟಾರ್ಟ್ ಅಪ್ ಯೋಜನೆಗಳ ಸ್ಫೂರ್ತಿಯ ಚಿಲುಮೆಯಾಗಿವೆ.ಯುವಶಕ್ತಿ,ಯುವಭಾರತದ ಪ್ರತಿಬಿಂಬ ಬೆಂಗಳೂರು. ವಂದೇ ಭಾರತ ಕೇವಲು ರೈಲು ಮಾತ್ರವಲ್ಲ ಅದು ನವಭಾರತದ ನಿರ್ಮಾಣದ ಪ್ರತೀಕ .ಈ ಹಿಂದೆ ಭಾರತದ ರೈಲುಗಳು ನಿಧಾನಗತಿಯಲ್ಲಿ ಚಲಿಸುತ್ತಿದ್ದವು ಈಗ ಅವುಗಳು ಶಕ್ತಿಯಿಂದ ಓಡುತ್ತಿವೆ.
400 ಕ್ಕೂ ಹೆಚ್ಚು ಹೊಸ ವಂದೇ ಭಾರತ್ ರೈಲುಗಳು ಭಾರತೀಯ ರೇಲ್ವೆಗೆ ಹೊಸ ಆಯಾಮ ನೀಡಿವೆ. ಸರಕು,ಸಾಗಣೆಗೆ ಅರ್ಪಿತವಾದ ಪ್ರತ್ಯೇಕ ಮಾರ್ಗ ನಿರ್ಮಿಸಲಾಗುತ್ತಿದೆ.ಹೊಸ ಹೊಸ ವಲಯಗಳನ್ನು ರೈಲು ಸಂಪರ್ಕಿಸುತ್ತಿದೆ. ಬೆಂಗಳೂರಿನಲ್ಲಿ ದೇಶದ ಮೊದಲ ಹವಾನಿಯಂತ್ರಿತ ಸರ್.ಎಂ.ವಿಶ್ವೇಶರಯ್ಯ ರೈಲು ನಿಲ್ದಾಣ ನಿರ್ಮಾಣವಾಗುತ್ತಿದೆ.ಯಶವಂತಪುರ ಹಾಗೂ ಕಂಟೋನ್ಮೆಂಟ್ ರೈಲು ನಿಲ್ದಾಣಗಳ ಸಮಗ್ರ ಸುಧಾರಣೆಗೆ ಒತ್ತು ನೀಡಲಾಗಿದೆ ಎಂದರು.
ವೈಮಾನಿಕ ಸಂಪರ್ಕಜಾಲವು ವಿಸ್ತಾರವಾಗುತ್ತಿದೆ. ವಿಮಾನಯಾನ ಮಾರುಕಟ್ಟೆಯಲ್ಲಿ ಭಾರತವು ಜಗತ್ತಿನಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. 2014 ರ ಪೂರ್ವದಲ್ಲಿ ದೇಶದಲ್ಲಿ 70 ವಿಮಾನ ನಿಲ್ದಾಣಗಳಿದ್ದವು ಈಗ ಅವು ದುಪ್ಪಟ್ಟಾಗಿದ್ದು 140 ಕ್ಕೆ ಏರಿವೆ. ಪ್ರಧಾನ ಮಂತ್ರಿ ಗತಿ ಶಕ್ತಿ, ಪಿಎಂ ಸ್ವನಿಧಿ, ಪಿಎಂ ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ದೇಶ ಹಾಗೂ ರಾಜ್ಯದ ಪ್ರಗತಿಯನ್ನು ನಾಡಿನ ಜನರ ಮುಂದೆ ವಿವರಿಸಿದರು.
ಉದ್ದೇಶಿತ ರಾಷ್ಟ್ರೀಯ ಲಾಜಿಸ್ಟಿಕ್ ನೀತಿಯು ಸಾರಿಗೆ ವೆಚ್ಚ ಕಡಿಮೆಗೊಳಿಸಿ, ಹೊಸತನ, ಅನ್ವೇಷಣೆಗೆ ದಾರಿ ಮಾಡಿಕೊಡಲಿದೆ. ಭೌತಿಕ ಮೂಲ ಸೌಕರ್ಯಗಳ ಅಭಿವೃದ್ಧಿಯೊಂದಿಗೆ ಸಾಮಾಜಿಕ ಮೂಲಸೌಕರ್ಯಗಳ ವಿಕಸನಕ್ಕೂ ಕರ್ನಾಟಕದ ಡಬಲ್ ಇಂಜಿನ್ ಸರ್ಕಾರ ಆದ್ಯತೆ ನೀಡಿದೆ ಎಂದು ತಿಳಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ, ಸಚಿವರಾದ ಆರ್. ಅಶೋಕ, ಡಾ.ಸಿ ಎನ್. ಅಶ್ವತ್ಥ ನಾರಾಯಣ, ಡಾ.ಕೆ. ಸುಧಾಕರ್, , ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಪಸ್ಥಿತರಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)