ತಿ.ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಗುರುವಿನಹಳ್ಳಿಯ ತೆಂಗಿನ ತೋಡದಲ್ಲಿ ಇಂದು ಬೆಳಗ್ಗೆ ಚಿರತೆ ಪ್ರತ್ಯಕ್ಷವಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ಉಂಟು ಮಾಡಿದೆ.
ಗುರುವಿನಹಳ್ಳಿ (ಗೊರ್ನಳ್ಳಿ)ಯ ಬಸ್ ನಿಲ್ದಾಣದ ಸಮೀಪವಿರುವ ಕಬ್ಬಿನ ಗದ್ದೆ ಮತ್ತು ತೆಂಗಿನ ತೋಟದ ಬಳಿ ಚಿರತೆ ಸೋಮವಾರ ಕಾಣಿಸಿಕೊಂಡಿದೆ. ಚಿರತೆ ಓಡಾಡುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈನ್ಫೋನ್ನಲ್ಲಿ ಸೆರೆ ಹಿಡಿದು ಬಳಿಕ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಚಿರತೆ ಓಡಾಡಿರುವ ಜಾಗದಲ್ಲಿ ಪರಿಶೀಲನೆ ನಡೆಸಿದರು. ಆದರೆ ಸಂಜೆವರೆಗೂ ಆ ಸ್ಥಳದಲ್ಲಿ ಶೋಧಕಾರ್ಯ ನಡೆಸಿದರು ಚಿರತೆ ಮಾತ್ರ ಅಧಿಕಾರಿಗಳ ಕಣ್ಣಿಗೆ ಬೀಳಲೇ ಇಲ್ಲ.
ಇದರಿಂದ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಗುರುವಿನಹಳ್ಳಿ ಸೇರಿದಂತೆ ಮಾರಗೌಡನಹಳ್ಳಿ, ಹುಣಸಗಹಳ್ಳಿ, ನೇರಲಕೆರೆ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಇನ್ನು ಚಿರತೆ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ಕಳೆದ ನಾಲ್ಕೈದು ತಿಂಗಳಿನಿಂದಲೂ ಗ್ರಾಮಸ್ಥರು ಹೇಳುತ್ತಿದ್ದರು. ನೇರಲಕೆರೆಯ ರೈತ ಮಹೇಶ್ ಎಂಬುವರ ತೋಟದ ಮನೆಯ ಬಳಿ ಕಟ್ಟಿಹಾಕಿದ್ದ ನಾಯಿ ಮರಿಯೊಂದನ್ನು ಸುಮಾರು ಆರು ತಿಂಗಳ ಹಿಂದೆ ಚಿರತೆ ತಿಂದುಹಾಕಿತ್ತು. ಆದರೆ, ಆಗ ಇದು ಚಿರತೆ ದಾಳಿಯಿಂದ ಆಗಿರುವುದಲ್ಲ ಎಂದು ರೈತರು ಸುಮ್ಮನಾಗಿದ್ದರು. ಆದರೂ ಅವರಲ್ಲಿ ಭಯ ಕಾಡುತ್ತಲೇ ಇತ್ತು. ಈಗ ಅದು ನಿಜವಾಗಿದೆ.
ಅಲ್ಲದೆ ಕಳೆದ ಒಂದು ತಿಂಗಳಲ್ಲಿ ತಾಲೂಕಿನಲ್ಲಿ ಈಗಾಗಲೇ ಯುವಕ ಮತ್ತು ಯುವತಿ ಸೇರಿ ಚಿರತೆಗೆ ಇಬ್ಬರು ಬಲಿಯಾಗಿದ್ದಾರೆ. ಇನ್ನು ಈ ಚಿರತೆಗಳ ಓಡಾಟ ತಾಲೂಕಿನ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ.
ಇದರ ನಡುವೆಯೇ ತಾಲೂಕಿನವರೇ ಆದ ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟೂರಾದ ಸಿದ್ದರಾಮನಹುಂಡಿಯ 5 ಕಿ.ಮೀ.ಅಂತರದ ತಾಯೂರು ಗ್ರಾಮದಲ್ಲಿ ಮತ್ತು ಇತ್ತ ಕುಣಿಗಲ್ ಗ್ರಾಮದಲ್ಲೂ ಇತ್ತೀಚೆಗೆ ಚಿರತೆಗಳು ಕಾಣಿಸಿಕೊಂಡಿವೆ.
ಚಿರತೆಗಳು ರಾಜಾರೋಷವಾಗಿ ತಾಲೂಕಿನ ಹಲವು ಭಾಗಗಳಲ್ಲಿ ಓಡಾಡುತ್ತಿವೆ. ರಾತ್ರಿ ಹಗಲೆನ್ನೆದೆ ಎಲ್ಲೆಲ್ಲೂ ಓಡಾಡುತ್ತಿದ್ದು, ಒಂದು ತಿಂಗಳ ಅವಧಿಯಲ್ಲಿ ಕುರಿ ಮೇಕೆ ಸೇರಿ ಅನೇಕ ಜಾನುವಾರುಗಳನ್ನು ತಿಂದು ಹಾಕಿವೆ ಎನ್ನಲಾಗುತ್ತಿದೆ. ಅನೇಕ ಜನರ ಮೊಬೈಲ್ ಕ್ಯಾಮರಾಗಳಲ್ಲಿ ಚಿರತೆಗಳ ಚಲನವಲನ ಸೆರೆಯಾಗುತ್ತಲೇ ಇದೆ. ಆದರೆ ಯಾವೊಂದು ಚಿರತೆಯೂ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿರುವ ಬೋನಿಗೆ ಈವರೆಗೂ ಬಿದ್ದಿಲ್ಲ.
ಇನ್ನು ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ಕೊಡಲಾಗುವುದು ಎಂದು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಆದರೆ, ಹೋದ ಪ್ರಾಣ ಮತ್ತೆ ಬರುವುದಿಲ್ಲ. ಹೀಗಾಗಿ ಸಿಎಂ ಅರಣ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಚಿರತೆ ಓಡಾಡುವ ಸ್ಥಳಗಳಲ್ಲಿ ಸೂಕ್ಷ್ಮವಾಗಿ ಗಮನಿಸಿ ಸೆರೆ ಹಿಡಿಯುವಂತೆ ತಾಕೀತು ಮಾಡಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)