ಬನ್ನೂರು (ಮೈಸೂರು ಜಿಲ್ಲೆ): ಬನ್ನೂರಿನಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕವನ್ನು ಉಂಟು ಮಾಡಿವೆ.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಿರತೆಗಳನ್ನು ನೋಡಿದ ರೈತರು ಗಾಬರಿಗೊಂಡಿದ್ದರು. ನಂತರ ಬನ್ನೂರಿನ ಪಟ್ಟಣಕ್ಕೂ ಅವು ಬಂದಿರುವುದು ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
ಚಿರತೆಗಳು ಪಟ್ಟಣ ಮತ್ತು ಪಟ್ಟಣದ ಹೊರವಲಯದಲ್ಲಿ ಕಾಣಿಸಿಕೊಂಡಿರುವ ವಿಷಯ ತಿಳಿದ ಬನ್ನೂರು ಪೊಲೀಸ್ ಠಾಣೆ ಪೊಲೀಸರು ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.
ಈ ನಡುವೆ ಅಕ್ಕಪಕ್ಕದ ಗ್ರಾಮಗಳಲ್ಲೂ ಚಿರತೆ ಬಂದಿರುವ ಬಗ್ಗೆ ಲೌಡ್ ಸ್ಪೀಕರ್ ಹಾಕಿಕೊಂಡು ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಚಿರತೆಗಳು ಬನ್ನೂರಿನ ಒಳಗಡೆ ಬಂದಿರುವುದನ್ನು ಸಿಸಿ ಕ್ಯಾಮೆರಾದ ಮೂಲಕ ನೋಡಿ ಗಾಬರಿಗೊಂಡಿರುವ ಜನತೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಕಾರ್ಯಪ್ರವೃತ್ತರಾಗಿದ್ದು ಚಿರತೆಗಳು ಎಲ್ಲೆಲ್ಲಿ ಓಡಾಡಿವೆ ಎಂಬುದನ್ನು ತಪಾಸಣೆ ಮಾಡುತ್ತಿದ್ದಾರೆ.
ಅಲ್ಲದೆ ಅವು ಬಂದದಾರಿಯಲ್ಲೇ ವಾಪಸ್ ಹೋಗಿವೆಯೇ ಅಥವಾ ಇಲ್ಲೇ ಎಲ್ಲಾದರೂ ಅಡಗಿ ಕುಳಿತಿವೆಯೇ ಎಂಬ ಬಗ್ಗೆ ಶೋಧಕಾರ್ಯದಲ್ಲಿ ತೊಡಗಿದ್ದಾರೆ.