ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ ಬಯಲಿಗೆ ಬರುತ್ತಲೇ ಇರುತ್ತದೆ. ಕಾರಣ ಇಲ್ಲಿನ ಬಹುತೇಕ ಎಲ್ಲ ಅಧಿಕಾರಿಗಳು ನುಂಗಣ್ಣಂದಿರೆ ಆಗಿದ್ದಾರೆ. ಇವರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಮಿಕಿಮಿಕಿ ನೋಡುತ್ತ ಕುಳಿತಿರುವುದನ್ನು ಬಿಟ್ಟರೆ ಮತ್ತೇನು ಮಾಡುತ್ತಿಲ್ಲ.
ಈ ಸಾರಿಗೆ ಸಚಿವರ ಬೇಜವಾಬ್ದಾರಿ ನಡೆಯಿಂದಲೇ ಇಂದು ಅಧಿಕಾರಿಗಳ ಕಿರುಕುಳಕ್ಕೆ ನೌಕರರು ಮನನೊಂದು ಖಿನ್ನತೆಗೆ ಜಾರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟಾದರೂ ಈ ಸಾರಿಗೆ ಸಚಿವರಿಗೆ ಸಂಸ್ಥೆಯಲ್ಲಿ ಏನಾಗುತ್ತಿದೆ ಎಂದು ಕೇಳುವ ಜವಾಬ್ದಾರಿಯೇ ಇಲ್ಲವಾಗಿದೆ. ಇಂಥ ಸಚಿವರನ್ನು ಇಟ್ಟುಕೊಂಡು ನೌಕರರು ಅದ್ಹೇಗೆತಾನೆ ಡ್ಯೂಟಿ ಮಾಡಲು ಸಾಧ್ಯ?
ಇಲ್ಲಿ ಭ್ರಷ್ಟ ಅಧಿಕಾರಿಗಳು ಹೇಳಿದ್ದನ್ನೇ ಕೇಳುವ ಎಂಡಿಗಳು ಮತ್ತು ಸಂಸ್ಥೆಯ ವಿವಿಧ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ನೌಕರರ ವಿರುದ್ಧ ಆರೋಪ ಮಾಡಿದ ಕೂಡಲೇ ಇದು ಸತ್ಯವಾ ಸುಳ್ಳ ಎಂಬ ಬಗ್ಗೆ ಯೋಚನೆಯನ್ನೂ ಮಾಡದೆ ಅಮಾನತಿನ ಶಿಕ್ಷೆಯನ್ನು ಕೊಟ್ಟುಬಿಡುತ್ತಾರೆ. ಆದರೆ, ಅಧಿಕಾರಿಗಳು ಭ್ರಷ್ಟಾಚಾರ ಮಾಡಿರುವುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಿದರೂ ಅವರನ್ನು ರಕ್ಷಿಸುತ್ತಾರೆ. ಇದು ಸಾರಿಗೆ ಸಂಸ್ಥೆಯಲ್ಲಿ ಆಗುತ್ತಿರುವ ಅನ್ಯಾಯ.
ಅಧಿಕಾರಿಗಳ ರಕ್ಷಣೆ ಮಾಡಿ ಅವರನ್ನು ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡುವ ನಾಟಕವಾಡಿ ಅವರನ್ನು ರಕ್ಷಿಸಿರುವುದಕ್ಕೆ ಹಲವಾರು ನಿದರ್ಶನಗಳಿವೆ. ಭ್ರಷ್ಟ ಅಧಿಕಾರಿಗಳ ಬಗ್ಗೆ ಭದ್ರತಾ ಮತ್ತು ಜಾಗೃತಾ ದಳದ ಅಧಿಕಾರಿಗಳು ಆರೋಪ ಸಾಬೀತುಪಡಿಸುವ ಎಲ್ಲ ಸಾಕ್ಷ್ಯಗಳನ್ನು ಹಾಜರು ಪಡಿಸಿದರೂ ಅದನ್ನು ಕಸದ ಬುಟ್ಟಿಗೆ ಹಾಕಿ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವುದರಲ್ಲೇ ಮುಂದಾಗಿದ್ದಾರೆ.
ಇದಕ್ಕೆ ಈ ಸರ್ಕಾರ ಕೂಡ ಬೆಂಬಲವಾಗಿ ನಿಂತಿದೆ ಎಂಬುದಕ್ಕೆ ಈವರೆಗೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿರುವ ನೌಕರರನ್ನು ಸೌಜನ್ಯಕ್ಕೂ ಭೇಟಿ ಮಾಡಿ ಅವರ ಸಮಸ್ಯೆ ಆಲಿಸದ ಸಿಎಂ, ಸಚಿವರ ನಡೆಯೇ ನಿದರ್ಶನವಾಗಿದೆ.
ಮೊನ್ನೆತಾನೆ ಡ್ಯೂಟಿಗೆ ಹೋದರೂ ಸರಿಯಾಗಿ ಡ್ಯೂಟಿಕೊಡುತ್ತಿಲ್ಲ ಎಂದು ಮನನೊಂದ ಇಬ್ಬರು ನೌಕರರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಲ್ಲದೆ ಇನ್ನು ಕೆಲ ಡಿಪೋಗಳಲ್ಲಿ ವಾರದ ರಜೆಯಲ್ಲಿ ಡ್ಯೂಟಿ ಮಾಡಿದ ಬಳಿಕ ಬೇರೊಂದು ದಿನ ರಜೆ ತೆಗೆದುಕೊಂಡರೂ ಅವರಿಗೆ ಗೈರುಹಾಜರಿ ತೋರಿಸುವ ಪರಿಪಾಠವು ನಡೆಯುತ್ತಿದೆ. ಇದರಿಂದ ನೊಂದ ನೌಕರರು ನಾವು ದುಡಿದರೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇನ್ನಾದರೂ ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ನಾಲ್ಕೂ ಸಂಸ್ಥೆಗಳಲ್ಲಿ ಇರುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಸೇರಿದಂತೆ ಎಲ್ಲ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಿ ನೌಕರರನ್ನು ಮತ್ತು ಸಂಸ್ಥೆಯನ್ನು ಉಳಿಸಬೇಕಿದೆ. ಇಲ್ಲದಿದ್ದರೆ ಭ್ರಷ್ಟರ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗಿ ನೌಕರರ ಆತ್ಮಹತ್ಯೆ ಸಂಖ್ಯೆಯೂ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.
![](https://vijayapatha.in/wp-content/uploads/2024/02/QR-Code-VP-1-1-300x62.png)