ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಭಾನುವಾರ ವಿಧ್ಯುಕ್ತವಾಗಿ ಚಾನೆ ದೊರೆಕಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಅರಮನೆಯ ದರ್ಬಾರ್ ಹಾಲ್ನಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವೈಭವೋಪೇತ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್ ನಡೆಸಿದರು.
vijayapatha.in - ವಿಜಯಪಥ.ಇನ್ ನಿಮಗೆ ವಿಶ್ವಾಸನೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅನಿಸಿದರೆ ನಮಗೆ ಆರ್ಥಕವಾಗಿ ಬಲ ನೀಡಿ. ಇನ್ನಷ್ಟು ಸತ್ಯನಿಷ್ಠ ವರದಿಗಳನ್ನು ಮಾಡುವುದಕ್ಕೆ ಬೆಂಬಲ ನೀಡಿ. ಕನಿಷ್ಠ 100 ರೂ. ಒಮ್ಮೆಗೆ ಹಾಕಿ. ನಮ್ಮನ್ನು ಪ್ರೋತ್ಸಾಹಿಸಿ.
ಚಾಮುಂಡಿಬೆಟ್ಟದಲ್ಲಿ ನಾಡಹಬ್ಬಕ್ಕೆ ಸರ್ಕಾರಿ ಮಟ್ಟದಲ್ಲಿ ಚಾಲನೆ ದೊರೆಯಿತು. ಮತ್ತೊಂದೆಡೆ ಅರಮನೆಯಲ್ಲಿ ನವರಾತ್ರಿ ಸಡಗರ ಶುರುವಾಯಿತು. ಖಾಸಗಿ ದರ್ಬಾರಿಗೆ ಪೂರಕವಾಗಿ ಬೆಳಗ್ಗೆ 5.30ರಿಂದಲೇ ಅರಮನೆಯಲ್ಲಿ ಪೂಜಾವಿಧಾನ ನೆರವೇರಿತು.
ಸಾಂಪ್ರದಾಯಿಕ ಪೋಷಾಕು ಧರಿಸಿದ್ದ ಪುರೋಹಿತರು, ಕಟ್ಟಿಗೆಯವರು, ಚೌಕಿದಾರರು, ದೀವಟಿಗೆ ಸಲಾಮಿನ ತಂಡ, ಶ್ವೇತ ವಸ್ತ್ರಧಾರಿಗಳಾಗಿದ್ದ ದರ್ಬಾರ್ ಭಕ್ಷಿಗಳ ಪರಿವಾರದೊಂದಿಗೆ ಯದುವೀರ ದರ್ಬಾರಿನ ಸ್ಥಳಕ್ಕೆ ರಂಗಪ್ರವೇಶ ಮಾಡಿದರು. ಆ ಮೂಲಕ ಗತಕಾಲದ ರಾಜವೈಭೋಗ ಮತ್ತೊಮ್ಮೆ ಕಣ್ಮುಂದೆ ಬರುವಂತೆ ಮಾಡಿದರು.
ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸಲು ಆಗಮಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್. ಆ ಹೊತ್ತಿಗೆ ಚೌಕಿದಾರರು, ಹೊಗಳುಭಟರ ಬಹುಪರಾಕ್ ಘೋಷಣೆ ರಿಂಗಣಿಸಿದವು. ಚಿನ್ನದ ಬಣ್ಣದ ಪೋಷಾಕು, ರೇಷ್ಮೆ, ಮುತ್ತಿನ ಸರವಿದ್ದ ಕಿರೀಟ, ಕೈಗಳು, ಕೊರಳಿಗೆ ಆಭರಣ ಧರಿಸಿದ್ದ ಯದುವೀರ ಚಾಮರಗಳ ಬೀಸುವಿಕೆಯ ನಡುವೆ ರಾಜ ಗಾಂಭೀರ್ಯದಲ್ಲಿ ನಡೆದು ಬಂದರು.
ಬಳಿಕ ಅವರಿಗೆ ಪುರೋಹಿತ ವರ್ಗದವರು ಸುಗಂಧದ್ರವ್ಯ ಪ್ರೋಕ್ಷಣೆ ಮಾಡಿ, ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿದರು. ಅರಮನೆಯ ಆವರಣದಲ್ಲಿರುವ ದೇವಾಲಯಗಳು, ಚಾಮುಂಡಿ ಬೆಟ್ಟ, ನಂಜನಗೂಡು, ಶಂಕರಮಠ ಸೇರಿ ಸುಮಾರು 18 ದೇವಾಲಯಗಳ ಪುರೋಹಿತರು ತೀರ್ಥ, ಪ್ರಸಾದ, ಹೂವು ನೀಡಿ, ಅಕ್ಷತೆಯನ್ನು ತಲೆಗೆ ಹಾಕಿ ಆಶೀರ್ವದಿಸಿದರು.
ಮೈಸೂರು ಅರಮನೆಯಲ್ಲಿ ಭಾನುವಾರ ನವರಾತ್ರಿ ಅಂಗವಾಗಿ ಸಂಪ್ರದಾಯದಂತೆ ಖಾಸಗಿ ದರ್ಬಾರ್ ನಡೆಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್. ಬಳಿಕ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಯದುವೀರ ತಲೆಬಾಗಿ ನಮಸ್ಕರಿಸಿದರು.
ಯದುವೀರ ಅವರಿಗೆ ತ್ರಿಷಿಕಾಕುಮಾರಿ ಒಡೆಯರ್ ಪಾದಪೂಜೆ ಮಾಡಿದರು. ಪುತ್ರ ಆದ್ಯವೀರ ಕೂಡ ತಂದೆಯ ಪಾದಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಮಧ್ಯಾಹ್ನ 2 ಗಂಟೆ ಬಳಿಕ ಅರಮನೆ ವೀಕ್ಷಣೆಗೆ ಅನುವು ಮಾಡಿಕೊಡಲಾಯಿತು.