ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ 3-4 ವರ್ಷಗಳಿಂದಲೂ ಸರ್ಕಾರ ಬೀಳಲಿದೆ, ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂಬುದರಲೇ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿವೆ.
ಅದರ ಜತೆಗೆ ಕಾಂಗ್ರೆಸ್ ಮತ್ತೆ ಸಿಎಂ ಬದಲಾಗಲಿದ್ದಾರೆ ಎಂದು ಹೇಳಿಕೆ ನೀಡಿದರೆ ಇತ್ತ ಸಣ್ಣ ನೀರಾವರಿ ಸಚಿವ ಜೆ.ಮಾಧುಸ್ವಾಮಿ ಅವರದು ಎನ್ನಲಾದ ಆಡಿಯೋವೊಂದು ಹರಿದಾಡಿದ ಸ್ವಪಕ್ಷಿಯರೆ ಕಿಡಿಕಾರುತ್ತಿದ್ದಾರೆ.
ಈ ಎಲ್ಲದರ ನಡುವೆ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿಯವರು ಬದಲಾಗ್ತಾರೆಂದು ಕಾಂಗ್ರೆಸ್ ಕಿಚ್ಚು ಹೊತ್ತಿಸಿದ ಬೆನ್ನಲ್ಲೇ ಮಾಧುಸ್ವಾಮಿಯವರ ಆಡಿಯೋ ಸ್ವಪಕ್ಷದಲ್ಲೇ ಕಿಡಿ ಹೊತ್ತಿಸಿದೆ ಮತ್ತು ಬೊಮ್ಮಾಯಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.
ನಾವು ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್ ಮಾಡ್ತೀದ್ದೀವಷ್ಟೇ ಎಂದು ಹೇಳಿರುವ ಸಚಿವ ಮಾಧುಸ್ವಾಮಿಯವರ ಆಡಿಯೋ ಲೀಕ್ ಆಗಿದ್ದು, ಹಲವು ಸಚಿವರು ಮಾಧುಸ್ವಾಮಿಯವರ ವಿರುದ್ಧ ಕಿಡಿಕಾರಿ, ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಚಿವ ಮಾಧುಸ್ವಾಮಿಯವರು ಆ ರೀತಿ ಬೇರೆ ಸಂದರ್ಭದಲ್ಲಿ ಹೇಳಿದ್ದಾರೆ. ಅವರ ಜತೆ ಮಾತಾಡಿದ್ದೇನೆ. ಮೂರು ತಿಂಗಳ ಹಿಂದೆ ಸಹಕಾರಿ ಇಲಾಖೆ ವಿಚಾರದಲ್ಲಿ ಮಾತಾಡಿರೋದು. ಯಾವುದೇ ತಪ್ಪು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲವು ಸರಿಯಿದೆ. ಏನೂ ತೊಂದರೆಯಿಲ್ಲ ಎಂದು ಹೇಳುವ ಮೂಲಕ ಡ್ಯಾಮೆಜ್ ಕಂಟ್ರೋಲ್‌ಗೆ ಯತ್ನಿಸಿದ್ದಾರೆ.
ಶಿವಮೊಗ್ಗ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ, ತನಿಖೆ ಪ್ರಕ್ರಿಯೆ ನಡೆಯುವಾಗ ನಾವು ಕಮೆಂಟ್ ಮಾಡೋದು ಸರಿಯಲ್ಲ. ಕಾನೂನು ಪ್ರಕಾರ ತನಿಖೆ ಮಾಡೋಕೆ ಆದೇಶ ಕೊಟ್ಟಿದ್ದೇನೆ. ಪೊಲೀಸರು ಅವರ ಕರ್ತವ್ಯ ಮಾಡ್ತಿದ್ದಾರೆ ಎಂದರು.
ಸ್ವಾತಂತ್ರ್ಯೋತ್ಸವ ದಿನ ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ ಫೋಟೋ ಇರುವ ಬ್ಯಾನರ್ ವಿಚಾರವಾಗಿ ಗುಂಪು ಘರ್ಷಣೆ ನಡೆದಿತ್ತು. ಇದೇ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಓರ್ವನಿಗೆ ಚಾಕು ಇರಿಯಲಾಗಿತ್ತು. ಘಟನೆ ಬಳಿಕ ಶಿವಮೊಗ್ಗದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಜೆ.ಸಿ. ಮಾಧುಸ್ವಾಮಿ ಅವರು ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ ಸಾಲದ ಕುರಿತ ಅವ್ಯವಹಾರದ ಬಗ್ಗೆ ಸಾಮಾಜಿಕ ಕಾಯಕರ್ತರೊಂದಿಗೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ವೈರಲ್ ಆಗಿತ್ತು. ಅದರಲ್ಲಿ ‘ಸಾಲದ ಬಗ್ಗೆ ಸಹಕಾರ ಸಚಿವ ಸೋಮಶೇಖರ್‌ಗೂ ಹೇಳಿದೆ. ಅವನೇನೂ ಕ್ರಮ ಜರುಗಿಸ್ತಾ ಇಲ್ಲ.. ಏನು ಮಾಡೋದು? ಸರ್ಕಾರವನ್ನು ನಾವು ನಡೆಸುತ್ತಿಲ್ಲ. ಮ್ಯಾನೇಜ್ ಮಾಡುತ್ತಿದ್ದೇವೆ. ಇನ್ನೆಂಟು ತಿಂಗಳು ತಳ್ಳಿದರೆ ಸಾಕು ಎಂದು ತಳ್ಳುತ್ತಿದ್ದೇವೆ ಎಂದು ಹೇಳಿದ್ದು ಕೇಳಿಬರುತ್ತದೆ.
![](https://vijayapatha.in/wp-content/uploads/2024/02/QR-Code-VP-1-1-300x62.png)