ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾಗಿ ಕೆಎಸ್‌ಆರ್‌ಟಿಸಿ ಹುಣಸೂರು ಘಟಕದ ಚಾಲಕ ಗೋವಿಂದರಾಜು ನೇಮಕಗೊಂಡಿದ್ದಾರೆ.
ಭೈರೇಗೌಡ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಗೋವಿಂದರಾಜು ಅವರನ್ನು ನೇಮಕ ಮಾಡಿರುವುದಾಗಿ ಸಂಘದ ಕಾನೂನು ಸಲಹೆಗಾರರು ಹಾಗೂ ಸುಪ್ರೀಂ ಮತ್ತು ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ತಿಳಿಸಿದ್ದಾರೆ.
ಇನ್ನು ಇವರೊಂದಿಗೆ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಚಾಲಕ ಕಂ ನಿರ್ವಾಹಕ ಜಯದೇವ್ ಅವರನ್ನು ಈ ಹಿಂದೆಯೇ ನೇಮಕ ಮಾಡಿಕೊಳ್ಳಲಾಗಿದೆ.
ಉಳಿದಂತೆ ಮೈಸೂರು ಭಾಗದ ಸಂಘದ ಅಧ್ಯಕ್ಷರಾಗಿ ಸತೀಶ್ ಕುಮಾರ್, ಬೆಂಗಳೂರು ಉತ್ತರ ವಿಭಾಗಕ್ಕೆ ಬಿಎಂಟಿಸಿಯ ಡಿಪೋ 9ರ ನೌಕರ ರುದ್ರೇಶ್, ಮಂಡ್ಯ ವಿಭಾಗದ ಅಧ್ಯಕ್ಷರಾಗಿ ಜವರೇಗೌಡ ಹಾಗೂ ಸಂಘದ ಖಜಾಂಚಿಯಾಗಿ ಗಂಗಾಧರ ನಾಯ್ಕ ಅವರನ್ನು ನೇಮಕ ಮಾಡಲಾಗಿದೆ.
ಇನ್ನು ನಮ್ಮ ಸಂಘದ ಎಲ್ಲ ಪದಾಧಿಕಾರಿಗಳು ಸದಾ ನೌಕರರ ಸಮಸ್ಯೆಗೆ ಸ್ಪಂದಿಸುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಅವರನ್ನು ಸಂಘದ ಸರ್ವ ಸದಸ್ಯರು ಒಮ್ಮತದಿಂದ ನೇಮಕ ಮಾಡಿದ್ದಾರೆ ಎಂದು ವಕೀಲ ಶಿವರಾಜು ತಿಳಿಸಿದ್ದಾರೆ.
ಸಂಘಕ್ಕೆ ಮತ್ತು ಸದಸ್ಯರಿಗೆ ಯಾವುದೇ ಚ್ಯುತಿ ಬಾರದಂತೆ ಕಾನೂನಿನಡಿಯಲ್ಲಿ ತಾವು ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಇದೇ ವೇಳೆ ಎಲ್ಲ ಪದಾಧಿಕಾರಿಗಳಿಗೂ ಕಿವಿ ಮಾತು ಹೇಳಿದರು.
ನಿಕಟಪೂರ್ವ ರಾಜ್ಯಾಧ್ಯಕ್ಷ ಭೈರೇಗೌಡ ಅವರು ಕೃಷಿ ಮತ್ತು ರಾಜಕಾರಣದತ್ತ ತೊಡಗಿಕೊಂಡಿರುವ ಕಾರಣ ತಮ್ಮ ಪದವಿಯಿಂದ ಹಿಂದೆ ಸರಿದಿದ್ದು ನೂತನವಾಗಿ ಗೋವಿಂದರಾಜು ಅವರನ್ನು ನೇಮಕ ಮಾಡಲಾಗಿದೆ.
ಇನ್ನು ಸಂಘದಲ್ಲಿ ಈವರೆಗೂ ಸಾರಿಗೆಯ ಅಧಿಕಾರಿಗಳು, ಚಾಲನಾ ಸಿಬ್ಬಂದಿ, ಕಚೇರಿಯಲ್ಲಿ ಕೆಲಸ ಮಾಡುವ ನೌಕರರು ಸೇರಿದಂತೆ 5 ಸಾವಿರ ಮಂದಿ ಸಂಘದ ಸದಸ್ಯತ್ವ ಪಡೆದಿದ್ದು, ಈವರೆಗೂ 4.5ಲಕ್ಷ ರೂಪಾಯಿಯನ್ನು ಉಳಿತಾಯ ಮಾಡಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲೆಗಳಲ್ಲಿ ವಕೀಲರನ್ನು ಸಂಘದಿಂದ ನೇಮಿಸಿಕೊಂಡು ಅವರಿಗೆ ಅಧಿಕಾರ ವಹಿಸಲಾಗುವುದು ಎಂದು ವಕೀಲ ಶಿವರಾಜು ತಿಳಿಸಿದರು.
ಈ ನಡುವೆ ಉಳಿದ ನೌಕರರು ಸಂಘದ ಸದಸ್ಯತ್ವಪಡೆದು ಹೆಚ್ಚಿನ ಒಗ್ಗಟ್ಟು ಪ್ರದರ್ಶಿಸಿದರೆ ಕಾನೂನು ಹೋರಾಟಕ್ಕೆ ಮತ್ತು ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರಶ್ನಿಸುವುದಕ್ಕೆ ಬಲ ಬರಲಿದೆ. ನಾವು ಬೀದಿಗಿಳಿದು ಯಾವುದೇ ಹೋರಾಟ ಮಾಡದೇ ಕಾನೂನಿನ ಮೂಲಕ ಹೋರಾಡಿ ಅನ್ಯಾಯವನ್ನು ಮೆಟ್ಟಿ ನಿಲ್ಲೋಣ ಎಂದು ಕರೆ ನೀಡಿದರು.