ಬೆಂಗಳೂರು: ಚಿಕ್ಕೋಡಿಯ ಹಿರೇಕೊಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನ ಮುನಿ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಕೊಲೆಗಾರರಿಗೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವರೂರ ನವಗ್ರಹ ತೀರ್ಥ ಕ್ಷೇತ್ರದ 108 ಆಚಾರ್ಯ ಗುಣಧರ ನಂದಿ ಮಹಾರಾಜ ಅವರು ಆರಂಭಿಸಿರುವ ಸಲ್ಲೇಖನ ವ್ರತವನ್ನು ಕೈಬಿಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ಅವರು, ಹತ್ಯೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಆಗ್ರಹಿಸಿ ಗುಣಧರ ನಂದಿ ಮಹಾರಾಜರು ಕೈಗೊಂಡಿರುವ ಸಲ್ಲೇಖನ ವ್ರತವನ್ನು ಕೈಬಿಡುವಂತೆ ಮನವಿ ಮಾಡಿದ್ದು, ಮುನಿಗಳ ಹತ್ಯೆಯ ಹಿಂದೆ ಯಾರೇ ಇದ್ದರೂ ಸರ್ಕಾರ ಸೂಕ್ತ ತನಿಖೆ ನಡೆಸಿ ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಲಿದೆ ಎಂದು ಹೇಳಿದರು.
ಸಾರ್ವಜನಿಕರು ಶಾಂತಿ ಕಾಪಾಡಬೇಕು ಹತ್ಯೆಕೋರರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮನವಿ ಡಿಸಿಎಂ ತಿಳಿಸಿದ್ದಾರೆ.
ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ಇದೇ ಜುಲೈ 6ರಂದು ಹಿರೇಕೋಡಿಯ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರನ್ನು ಇಬ್ಬರು ಹಂತಕರು ಅಪಹರಿಸಿ ಬಳಿಕ ಬರ್ಬರವಾಗಿ ಹತ್ಯೆ ಮಾಡಿದ್ದರು. ಹತ್ಯೆ ಮಾಡಿದ ಬಳಿಕ ಮೃತದೇಹವನ್ನ ಮಣ್ಣಲ್ಲಿ ಹೂತಿಟ್ಟಿದ್ದರು.
ಈ ಹಿನ್ನಲೆ ಪೊಲೀಸರಿಗೆ ನಿನ್ನೆ (ಶನಿವಾರ) ಕಾಮಕುಮಾರ ನಂದಿ ಮಹರಾಜರ ಮೃತದೇಹ ಕಟಕಬಾವಿ ಗ್ರಾಮದಲ್ಲಿ ಸಿಕ್ಕಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುತ್ತು. ಇಂದು ಬೆಳಗ್ಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
![](https://vijayapatha.in/wp-content/uploads/2024/02/QR-Code-VP-1-1-300x62.png)