NEWSದೇಶ-ವಿದೇಶಸಿನಿಪಥ

ಕೊರೊನಾ ವಿರುದ್ಧದ ಸಮರಕ್ಕೆ ಕೈ ಜೋಡಿಸಿದ ನಟ ಶಾರುಖ್‌ ಖಾನ್‌

ಸಾವಿರಾರು ಬಡವರ ಹಸಿವು ನೀಗಿಸುತ್ತಿರುವ ದಾನಿ l ಕ್ವಾರಂಟೈನ್‌ಗೆ ತನ್ನ ಕಚೇರಿಯನ್ನೇ ಕೊಟ್ಟರು

ವಿಜಯಪಥ ಸಮಗ್ರ ಸುದ್ದಿ

ಮುಂಬೈ:  ಕೊರೊನಾ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿರುವ ಬಾಲಿವುಡ್ ಬಾದ್ ಷಾ ಶಾರುಖ್‌ ಖಾನ್‌ ತನ್ನ ಕಚೇರಿಯನ್ನು ಕ್ವಾರಂಟೈನ್‌ಗೆ ಬಳಸಿಕೊಳ್ಳುವುದಕ್ಕೆ ನೀಡಿದ್ದು, ಅಭಿಮಾನಗಳ ಪ್ರಶಂಸೆಗೆ ಪಾತ್ರವಾಗಿದೆ.

ಹೌದು ಕೊರೊನಾ ಸೋಂಕಿನ ವಿರುದ್ಧ ಸಮರ ಸಾರಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ರಾಜಕಾರಣಿಗಳು, ಉದ್ಯಮಿಗಳು ಬೆನ್ನಿಗೆ ನಿಂತಿದ್ದಾರೆ. ದೇಣಿಗೆ ನೀಡುವುದರ ಜತೆಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಆನ್‌ಲೈನ್‍ನಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ.  ಅವರಂತೆ ಸಿನಿಮಾ ತಾರೆಯರು ಮುಂದಾಗಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಜತೆಗೆ ತಮ್ಮ ನೆಚ್ಚಿನ ನಟ, ನಟಿಯರ ದಾರಿಯಲ್ಲಿ ಸಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಅಂದಹಾಗೆ ಶಾರುಖ್‌ ಖಾನ್‌ ತನ್ನ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಪರವಾಗಿ ಪಿಎಂ ಕೇರ್ಸ್, ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಿಧಿಗೆ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ. ಜತೆಗೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿಗೆ ಐವತ್ತು ಸಾವಿರ ಕಿಟ್‍ಗಳನ್ನು ನೀಡುತ್ತಿರುವುದಾಗಿ ಹೇಳಿದ್ದಾರೆ.
ಅಷ್ಟೇ ಅಲ್ಲ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಶಾರುಖ್‌ ತನ್ನ ಖಾಸಗಿ ಕಚೇರಿಯನ್ನು ಮಹಿಳೆಯರು, ವೃದ್ಧರು ಹಾಗೂ ಮಕ್ಕಳಿಗೆ ಕ್ವಾರಂಟೈನ್‍ಗಾಗಿ ಬಳಸಿಕೊಳ್ಳುವುದಕ್ಕೆ ನೀಡಿದ್ದಾರೆ. ಅದಕ್ಕಾಗಿ ಬೃಹತ್‌ ಮುಂಬೈ  ಅಧಿಕಾರಿಗಳು ಟ್ವಿಟರ್‌ನಲ್ಲಿ ಶಾರುಖ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಶಾರುಖ್ ಖಾನ್ ನಡೆಗೆ ಅಭಿಮಾನಿಗಳೂ ಟ್ವಿಟರ್‌ನಲ್ಲಿ ಪ್ರಶಂಸೆಯ ಮಳೆಗರೆಯುತ್ತಿದ್ದು, ‘ಸ್ವದೇಶ್’ನಲ್ಲಿ ಶಾರುಖ್ ಖಾನ್ ಮೋಹನ್ ಭಾರ್ಗವ ಪಾತ್ರ ಪೋಷಿಸಿಲ್ಲ, ಜೀವಿಸಿದ್ದಾರೆ ಎಂದು  ಓರ್ವ ಅಭಿಮಾನಿ ಹೇಳಿದ್ದರೆ ಮತ್ತೊಬ್ಬರು ಅದು ರೆಡ್ ಚಿಲ್ಲೀಸ್ ಆಫೀಸ್ ಅಲ್ಲ, ಶಾರುಖ್ ಖಾನ್ ಖಾಸಗಿ ಕಾರ್ಯಾಲಯವನ್ನು ಕ್ವಾರಂಟೈನ್‍ಗೆ ನೀಡಿರುವುದು ಅಭಿನಂದನಾರ್ಹ ಎಂದು  ಶ್ಲಾಘಿಸಿದ್ದಾರೆ.

ಇದಿಷ್ಟೇ ಅಲ್ಲದೆ ಏಕ್ ಸಾಥ್ ಪ್ರತಿಷ್ಠಾನದ ಜೊತೆಗೆ ಕೈಜೋಡಿಸಿ ಮೀರ್ ಪ್ರತಿಷ್ಠಾನ ಮುಂಬೈನ 5500 ಕುಟುಂಬಗಳಿಗೆ ತಿಂಗಳವರೆಗೆ ಊಟ, ವಸತಿ ಕಲ್ಪಿಸಿದೆ. ಇನ್ನು ಕೊಲ್ಕತ ನೈಟ್ ರೈಡರ್ಸ್, ಮೀರು ಫೌಂಡೇಷನ್ ಜಂಟಿಯಾಗಿ ಮಹಾರಾಷ್ಟ್ರ, ಪಶ್ವಿಮ ಬಂಗಾಳಗಳಲ್ಲಿ ವೈದ್ಯಕೀಯ ಸಿಬ್ಬಂದಿಗೆ 50 ಸಾವಿರ ಪರ್ಸನಲ್ ಪ್ರೊಟೆಕ್ಟೀವ್ ಕಿಟ್‍ಗಳನ್ನು ನೀಡಿದ್ದಾರೆ.

ಆಸ್ಪತ್ರೆ, ಮನೆಯ ಬಳಿ ಊಟದ ಸೌಲಭ್ಯವಿಲ್ಲದ 2000 ಜನರಿಗೆ ಅಡುಗೆಮನೆ ವ್ಯವಸ್ಥೆಯನ್ನು ಮಾಡಿಸಿದ್ದಾರೆ. ರೋಟಿ ಪ್ರತಿಷ್ಠಾನದ ಜೊತೆಗೆ ಕೈಜೋಡಿಸಿ 3 ಲಕ್ಷ ಮೀಲ್ಸ್ ಕಿಟ್‍ಗಳನ್ನು ಮುಂಬೈನ ಹತ್ತು ಸಾವಿರ ದಿನಗೂಲಿಗಳಿಗೆ ನೀಡಿದ್ದಾರೆ. ನ್ಯೂಡೆಲ್ಲಿಯಲ್ಲಿ 2500 ದಿನಗೂಲಿಗಳಿಗೆ ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ.

ಉತ್ತರ ಪ್ರದೇಶ, ಬಿಹಾರ್, ಉತ್ತರಾಖಂಡ, ಪಶ್ಚಿಮ ಬಂಗಾಳದ ಆಸಿಡ್ ದಾಳಿ ಸಂತ್ರಸ್ತರಿಗೂ ಸಹಾಯ ಮಾಡುತ್ತಿರುವುದಾಗಿ ಘೋಷಿಸಿರುವ ಶಾರುಖ್ ಖಾನ್‌ ಕಾಯಕ ಇತರರಿಗೆ ಮಾದರಿಯಾಗಿದ್ದು, ಇವರ ಹಾದಿಯಲ್ಲಿ ಇನ್ನಷ್ಟು ಮಂದಿ ಸಾಗಿದರೆ ಹಸಿವು ಮತ್ತು ರೋಗದಿಂದ ನರಳುತ್ತಿರುವವರಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಿದಷ್ಟು ಹರ್ಷ ಉಂಟಾಗಲಿದೆ.

ನೊಂದವರ ಕಣ್ಣೀರು ಒರೆಸಲು ಸಮಾಜದ ಉಳ್ಳವರು ಮುಂದಾಗುವ ಮೂಲಕ ದೇಶದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಹುಲ್ಲು ಎತ್ತಿದಷ್ಟು ಸರಳವಾಗಿ ನೀಗಿಸಬೇಕಿದೆ.

Leave a Reply

error: Content is protected !!